ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ನಡೆದ ಚಿನ್ನದ ಕಳ್ಳತನ ಪ್ರಕರಣವನ್ನು ತಿಪಟೂರು ನಗರ ಪೊಲೀಸರು ಭೇದಿಸಿದ್ದಾರೆ. ಚಿತ್ರನಟಿ ಹಾಗೂ ರಂಗಭೂಮಿ ಕಲಾವಿದೆ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹೇಮಲತಾ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಂಕರ್ (26), ಗುರುರಾಜು (33) ಮತ್ತು ಮನೋಜ್ (18) ಎಂದು ಗುರುತಿಸಲಾಗಿದೆ.
ತಿಪಟೂರು ನಗರದ ವಿಜಯನಗರದಲ್ಲಿ ವಾಸವಿದ್ದ ನಟಿ ಹೇಮಲತಾ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ 20 ಗ್ರಾಂ ತೂಕದ ಚಿನ್ನದ ಪದಕ ನೀಡಿ ಗೌರವಿಸಲಾಗಿತ್ತು. ಈ ಚಿನ್ನದ ಪದಕ ಸೇರಿದಂತೆ ಮಾಂಗಲ್ಯ ಸರ, ಉಂಗುರಗಳು ಸೇರಿದಂತೆ ಒಟ್ಟು ಸುಮಾರು 90 ಗ್ರಾಂ ಚಿನ್ನದ ಆಭರಣಗಳನ್ನು ಅವರು ಮನೆಯ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದರು.
ಇತ್ತೀಚೆಗೆ ಮನೆಗೆ ಪೈಂಟ್ ಕೆಲಸ ಮಾಡಲು ಬಂದಿದ್ದ ಸಂದರ್ಭದಲ್ಲೇ ಚಿನ್ನದ ಆಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಅನುಮಾನಗೊಂಡ ನಟಿ ಹೇಮಲತಾ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು, ಇನ್ಸ್‌ಪೆಕ್ಟರ್ ರವಿಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗಿತ್ತು.
ತನಿಖೆ ವೇಳೆ ಆರೋಪಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ 90 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಗೆ ತಿಪಟೂರು ನಗರ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರು ಪ್ರಶಂಸಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




