ರಾಜ್ಯದ ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ (95) ಅವರು ಇಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂತಾಪ ಮೂಡಿಸಿದೆ.
ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು, ಕರ್ನಾಟಕ ರಾಜಕಾರಣದಲ್ಲಿ ಅಪರೂಪದ ಅನುಭವ, ಪ್ರಭಾವ ಮತ್ತು ಗೌರವ ಪಡೆದ ಹಿರಿಯ ಮುತ್ಸದ್ದಿಗಳಲ್ಲಿ ಒಬ್ಬರಾಗಿದ್ದರು. ದೇಶದಲ್ಲೇ ಅತ್ಯಂತ ಹಿರಿಯ ಶಾಸಕರಾಗಿದ್ದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಹಲವು ದಶಕಗಳ ಕಾಲ ಪ್ರತಿನಿಧಿಸಿದ್ದರು.
ಶಾಮನೂರು ಶಿವಶಂಕರಪ್ಪ ಅವರು ಜೂನ್ 16, 1930ರಂದು ದಾವಣಗೆರೆ ತಾಲೂಕಿನ ಶಾಮನೂರು ಗ್ರಾಮದಲ್ಲಿ ಜನಿಸಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ, ಡಿಆರ್‌ಎಂ ಸೈನ್ಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು. ಅಕ್ಕಿ ವ್ಯಾಪಾರದಿಂದ ಜೀವನ ಆರಂಭಿಸಿದ ಅವರು, ನಂತರ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು ರಾಜಕೀಯ ಪ್ರವೇಶ ಮಾಡಿದರು.
ರಾಜಕೀಯ ಜೀವನದ ಆರಂಭದಲ್ಲಿ ದಾವಣಗೆರೆ ನಗರಸಭೆಯ ಸದಸ್ಯರಾಗಿದ್ದ ಶಾಮನೂರು, ನಂತರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1994ರಲ್ಲಿ 64ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕರಾಗಿ ಆಯ್ಕೆಯಾಗಿದ್ದು ಅವರ ರಾಜಕೀಯ ಜೀವನದ ಮಹತ್ವದ ತಿರುವಾಯಿತು. ಆ ಬಳಿಕ ದಾವಣಗೆರೆ ಅವರ ರಾಜಕೀಯ ಭದ್ರಕೋಟೆಯಾಗಿ ರೂಪುಗೊಂಡಿತು.
1994, 2004, 2008, 2013, 2018 ಮತ್ತು 2023ರಲ್ಲಿ ಒಟ್ಟು ಆರು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗುವ ಮೂಲಕ ಅವರು ಅಪರೂಪದ ಸಾಧನೆ ಮಾಡಿದರು. ಕ್ಷೇತ್ರ ವಿಂಗಡಣೆ ಬಳಿಕ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. 1997ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮತ್ತೆ ಲೋಕಸಭೆಗೆ ಸ್ಪರ್ಧಿಸಿದರೂ ಸೋಲು ಕಂಡಿದ್ದರು.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಶಾಮನೂರು ಶಿವಶಂಕರಪ್ಪ ಅವರು ತೋಟಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿ ತಮ್ಮ ಆಡಳಿತಾತ್ಮಕ ಅನುಭವವನ್ನು ಪ್ರದರ್ಶಿಸಿದ್ದರು. ರಾಜಕೀಯದ ಜೊತೆಗೆ ಕಳೆದ ಮೂರು ದಶಕಗಳ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು.
ವೀರಶೈವ–ಲಿಂಗಾಯತ ಸಮುದಾಯದ ಪ್ರಭಾವಿ ನಾಯಕನಾಗಿದ್ದ ಶಾಮನೂರು ಶಿವಶಂಕರಪ್ಪ ಅವರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಸಮಾಜ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದರು. ಜೊತೆಗೆ ದಾವಣಗೆರೆ ಜಿಲ್ಲೆಯ ಬಾಪೂಜಿ ವಿದ್ಯಾಸಂಸ್ಥೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿದರು.
ರಾಜಕೀಯಕ್ಕೆ ತಡವಾಗಿ ಪ್ರವೇಶಿಸಿದರೂ, ಸುಮಾರು 35 ವರ್ಷಗಳ ಕಾಲ ಸಕ್ರಿಯ ಸಾರ್ವಜನಿಕ ಜೀವನ ನಡೆಸಿದ ಶಾಮನೂರು ಶಿವಶಂಕರಪ್ಪ ಅವರು, ತಮ್ಮ ಅಂತಿಮ ಕ್ಷಣಗಳವರೆಗೂ ಜನಸೇವೆಯಲ್ಲೇ ತೊಡಗಿಸಿಕೊಂಡಿದ್ದರು. ಅವರ ನಿಧನದಿಂದ ರಾಜ್ಯವು ಒಬ್ಬ ಅನುಭವಿ, ಸಂಯಮಿತ ಹಾಗೂ ಜನಪ್ರಿಯ ನಾಯಕನನ್ನು ಕಳೆದುಕೊಂಡಂತಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



