ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಕ್ತಾಯವಾದ ಬಳಿಕ, ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಕಾಂಗ್ರೆಸ್ ಮಹತ್ವದ ಸಭೆಯನ್ನು ಕರೆಯಲು ನಿರ್ಧರಿಸಲಾಗಿದೆ. ಪಕ್ಷದೊಳಗಿನ ನಾಯಕತ್ವ ಬದಲಾವಣೆ ಹಾಗೂ ಬಣಗಾರಿಕೆ ಸಂಬಂಧಿಸಿದ ಗೊಂದಲ ನಿವಾರಣೆಯ ಉದ್ದೇಶದಿಂದ ಈ ಸಭೆ ನಡೆಯಲಿದ್ದು, ಇದಕ್ಕಾಗಿ AICC ವೀಕ್ಷಕರು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ‘ಕುರ್ಚಿ ಕದನ’ದ ಅಂತಿಮ ತೀರ್ಮಾನವು ಡಿಸೆಂಬರ್ 21 ಅಥವಾ 22ರಂದು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ತೀರ್ಮಾನವು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ದಿನಾಂಕ ಲಭ್ಯತೆಯ ಮೇಲೆ ಅವಲಂಬಿತವಾಗಿದೆ.
ಪ್ರಸ್ತುತ ರಾಹುಲ್ ಗಾಂಧಿ ಜರ್ಮನಿ ಪ್ರವಾಸದಲ್ಲಿದ್ದು, ಅಲ್ಲಿಂದ ನೇರವಾಗಿ ಇಟಲಿಗೆ ತೆರಳುವ ಸಾಧ್ಯತೆ ಇದೆ. ಆ ಕಾರಣದಿಂದಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೀಡಬೇಕಾದ ಬುಲಾವ್ ಡಿಸೆಂಬರ್ 21 ಅಥವಾ 22ರಿಂದ ಮುಂದೂಡಲ್ಪಡುವ ಸಾಧ್ಯತೆಯೂ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ, ಈ ನಡುವೆ ಪಕ್ಷದ ಹೈಕಮಾಂಡ್ ವರ್ಷಾಂತ್ಯದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿ ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ತರಾತುರಿಯ ನಿರ್ಧಾರಕ್ಕಿಂತ ಈ ತಿಂಗಳ ಕೊನೆಯಲ್ಲಿ ಇಬ್ಬರು ನಾಯಕರನ್ನು ಕರೆಸಿ ಸಮಗ್ರ ಚರ್ಚೆ ನಡೆಸುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಡಿಸೆಂಬರ್ 15ರಂದು ಜರ್ಮನಿಗೆ ತೆರಳಿರುವ ರಾಹುಲ್ ಗಾಂಧಿ ಡಿಸೆಂಬರ್ 23ರಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಮೊದಲಿಗೆ ಹೇಳಲಾಗಿತ್ತು. ಆದರೆ, ಜರ್ಮನಿಯಿಂದ ಅವರು ನೇರವಾಗಿ ಇಟಲಿಗೆ ತೆರಳುವ ಸಾಧ್ಯತೆ ಇದ್ದು, ನಂತರ ಡಿಸೆಂಬರ್ 27ರಂದು ಅಮೆರಿಕ ಪ್ರವಾಸಕ್ಕೆ ತೆರಳುವ ಯೋಜನೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಈ ನಡುವೆ, ಪಕ್ಷದ ಹೈಕಮಾಂಡ್ ನಾಯಕರು ರಾಜ್ಯದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಮುಂದುವರಿದಿದೆ.
ವರದಿ : ಲಾವಣ್ಯ ಅನಿಗೋಳ




