ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿಲ್ಲಿ ಭೇಟಿ, ಮತಗಳ್ಳತನದ ವಿರುದ್ಧ ನಡೆಯುತ್ತಿರುವ ಕಾಂಗ್ರೆಸ್ ಅಭಿಯಾನದ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದ್ದು, ರಾಜ್ಯ ರಾಜಕಾರಣ ಅಥವಾ ನಾಯಕತ್ವದ ಕುರಿತಾಗಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ದಿಲ್ಲಿಯಲ್ಲೇ ವಾಸ್ತವ್ಯ ಹೂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚಟುವಟಿಕೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾನುವಾರ ದಿಲ್ಲಿಯಲ್ಲಿ ನಡೆದ ಮತಗಳ್ಳತನದ ವಿರುದ್ಧದ ಹೋರಾಟದ ರ್ಯಾಲಿಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ದಿಲ್ಲಿಗೆ ತೆರಳಿದ್ದರು. ದಿಲ್ಲಿಗೆ ಆಗಮಿಸಿದ ಕೂಡಲೇ ಅವರು ರ್ಯಾಲಿ ನಡೆಯುವ ಸ್ಥಳಕ್ಕೆ ನೇರವಾಗಿ ತೆರಳಿ, ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ. ಬಳಿಕ ಅವರು ಅದೇ ದಿನ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಲ್ಲಿಯಲ್ಲೇ ವಾಸ್ತವ್ಯ ಹೂಡಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಬೇಕು ಎನ್ನುವುದು ಡಿಸಿಎಂ ಆಪ್ತ ವಲಯದ ಆಗ್ರಹವಾಗಿದ್ದು, ಈ ನಿಟ್ಟಿನಲ್ಲಿ ಸಭೆ ನಿಗದಿಪಡಿಸುವಂತೆ ಹೈಕಮಾಂಡ್‌ಗೆ ಡಿಸಿಎಂ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ರಾತ್ರಿ ದಿಲ್ಲಿಗೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಈ ಅಭಿಯಾನಕ್ಕೆ ಕರ್ನಾಟಕದಿಂದ ತೆರಳಿರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾಡಲಾದ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ಕರ್ನಾಟಕ ಭವನದಲ್ಲಿ ಆಯೋಜಿಸಿದ್ದ ಬ್ರೇಕ್‌ಫಾಸ್ಟ್ ಕಾರ್ಯಕ್ರಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಸೇರಿದಂತೆ ಆಡಳಿತ ಪಕ್ಷದ ಕೆಲ ಶಾಸಕರು ಹಾಗೂ ಮುಖಂಡರು ಭಾಗವಹಿಸಿದ್ದರು.
ಇದರೊಂದಿಗೆ, ಮತಗಳ್ಳತನದ ವಿರುದ್ಧದ ಹೋರಾಟದ ರ್ಯಾಲಿಗೆ ಮುನ್ನ, ಎಐಸಿಸಿಯ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಆಯೋಜಿಸಲಾಗಿದ್ದ ಭೋಜನ ಕೂಟದಲ್ಲೂ ಡಿಸಿಎಂ ಭಾಗಿಯಾಗಿದ್ದರು. ಈ ವೇಳೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಹೈಕಮಾಂಡ್‌ನ ಪ್ರಮುಖ ನಾಯಕರೊಂದಿಗೆ ಡಿಸಿಎಂ ಮುಖಾಮುಖಿಯಾಗಿದ್ದಾರೆ.
ವರದಿ : ಲಾವಣ್ಯ ಅನಿಗೋಳ




