ಕರ್ನಾಟಕ ಗೃಹ ಮಂಡಳಿಯು ರಾಜಧಾನಿಯಲ್ಲಿ ಅಭಿವೃದ್ಧಿಪಡಿಸಿರುವ ರಾಜಾಪುರ ಬಡಾವಣೆಯಲ್ಲಿನ 332 ನಿವೇಶನಗಳ ಹಂಚಿಕೆಗೆ ಮುಂದಾಗಿದೆ. ಅಲ್ಲದೆ, ಇಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಶೇ.50ರ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ನೀಡುತ್ತಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಕರ್ನಾಟಕ ಗೃಹ ಮಂಡಳಿ ‘ಸೂರ್ಯನಗರ’ ಯೋಜನೆಯಡಿ ಹಂತ ಹಂತವಾಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದೆ.
ಇಲ್ಲಿ ನಿವೇಶನಗಳ ಜೊತೆಗೆ ವಿವಿಧ ಅಳತೆಯ ಹಾಗೂ ಅತ್ಯಾಧುನಿಕ ಸೌಲಭ್ಯಗಳಿರುವ ಫ್ಲ್ಯಾಟ್‌ಗಳ ವಸತಿ ಸಮುಚ್ಚಯ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಸೂರ್ಯನಗರ ಮೊದಲ ಹಂತದಲ್ಲಿ ‘ಸೂರ್ಯ ಡಿವೈನ್’, ‘ಸೂರ್ಯ ಶೈನ್’ ಮತ್ತು ನಾಲ್ಕನೇ ಹಂತದಲ್ಲಿ ‘ಸೂರ್ಯ ನಿಸರ್ಗ ವ್ಯಾಲಿ’ ಸೇರಿದಂತೆ ಹಲವು ಅತ್ಯಾಧುನಿಕ ಫ್ಲ್ಯಾಟ್ ಯೋಜನೆಗಳನ್ನು ಮಂಡಳಿ ರೂಪಿಸಿದೆ.
ಇದೀಗ, ಸೂರ್ಯನಗರ 2ನೇ ಹಂತದ ಮುಂದುವರಿದ ರಾಜಾಪುರ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿರುವ 30×40, 30×50 ಹಾಗೂ 40×60 ಅಳತೆಯ ಒಟ್ಟು 332 ನಿವೇಶನಗಳ ಹಂಚಿಕೆಗೆ ಗೃಹ ಮಂಡಳಿ ಮುಂದಾಗಿದೆ. ರಾಜಾಪುರ ಬಡಾವಣೆಯನ್ನು ಸುಮಾರು 176 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಿ, ವಿವಿಧ ಅಳತೆಯ ಸುಮಾರು 1,100 ನಿವೇಶನಗಳನ್ನು ರೂಪಿಸಲಾಗಿತ್ತು. ಈ ನಿವೇಶನಗಳನ್ನು 2019ರಲ್ಲೇ ಹಂಚಿಕೆ ಮಾಡಲು ಗೃಹ ಮಂಡಳಿ ಮುಂದಾಗಿದ್ದರೂ, ಕಾನೂನು ತೊಡಕುಗಳಿಂದಾಗಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ನಂತರ, ಕಳೆದ ವರ್ಷ ಮೊದಲ ಹಂತದಲ್ಲಿ 768 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಇದೀಗ ಎರಡನೇ ಹಂತದಲ್ಲಿ ಉಳಿಕೆ 332 ನಿವೇಶನಗಳ ಹಂಚಿಕೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಈ ನಿವೇಶನಗಳನ್ನು ಆರ್ಥಿಕ ದುರ್ಬಲ ವರ್ಗ (EWS), ಕಡಿಮೆ ಆದಾಯ ಗುಂಪು (LIG), ಮಧ್ಯಮ ಆದಾಯ ಗುಂಪು (MIG) ಹಾಗೂ ಹೆಚ್ಚು ಆದಾಯ ಗುಂಪು (HIG) ವರ್ಗಗಳ ಆಧಾರದ ಮೇಲೆ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಕಡಿಮೆ ಆದಾಯ ಗುಂಪಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅರ್ಜಿದಾರರಿಂದ ಪಾವತಿಸಲಾಗುವ ನೋಂದಣಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿ ಮಾಡುವುದಿಲ್ಲ. ಆರ್ಥಿಕ ದುರ್ಬಲ ವರ್ಗದವರಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಈ ವರ್ಗದ ಅರ್ಜಿದಾರರು ತಮ್ಮ ಕುಟುಂಬದ ಇತ್ತೀಚಿನ ವಾರ್ಷಿಕ ಆದಾಯದ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ನಗರ ಪ್ರದೇಶದ ಅರ್ಜಿದಾರರ ವಾರ್ಷಿಕ ಆದಾಯ ರೂ. 2 ಲಕ್ಷ ಹಾಗೂ ಗ್ರಾಮೀಣ ಪ್ರದೇಶದ ಅರ್ಜಿದಾರರ ವಾರ್ಷಿಕ ಆದಾಯ ರೂ. 1.20 ಲಕ್ಷ ಮೀರಬಾರದು.
ಇದಕ್ಕಾಗಿ ಸಂಬಂಧಪಟ್ಟ ತಹಸೀಲ್ದಾರ್ ನೀಡಿರುವ ಆದಾಯ ಪ್ರಮಾಣಪತ್ರವನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕು. ಉಳಿಕೆ ನಿವೇಶನಗಳ ವಿಲೇವಾರಿಗೆ ಗೃಹ ಮಂಡಳಿ ಆನ್‌ಲೈನ್ ಮೂಲಕ ಸಾರ್ವಜನಿಕರಿಂದ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಇ-ಪೇಮೆಂಟ್ ಮೂಲಕ ಆರಂಭಿಕ ಠೇವಣಿ ಮೊತ್ತ ಪಾವತಿಸಿ, ಡಿಸೆಂಬರ್ 31ರೊಳಗೆ ಕರ್ನಾಟಕ ಗೃಹ ಮಂಡಳಿ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




