‘ಸಾರಥಿ’ ಇಲ್ಲದೆ JDS ಕಂಗಾಲು? ದಳಕ್ಕೆ ಕಾಡುತ್ತಿದೆ HDK ಅನುಪಸ್ಥಿತಿ

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿ ಒಂದು ವಾರಕ್ಕೂ ಹೆಚ್ಚು ಸಮಯ ಕಳೆದಿದ್ದು, ಈ ಬಾರಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಆದರೆ, ಈ ಅವಕಾಶವನ್ನು ರಾಜಕೀಯವಾಗಿ ಸದುಪಯೋಗಪಡಿಸಿಕೊಳ್ಳುವಲ್ಲಿ ಜೆಡಿಎಸ್ ಪಕ್ಷ ವಿಫಲವಾಗುತ್ತಿರುವಂತೆ ಕಾಣಿಸುತ್ತಿದೆ.

ಇದಕ್ಕೆ ಪ್ರಮುಖ ಕಾರಣವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅನುಪಸ್ಥಿತಿ ಚರ್ಚೆಗೆ ಬಂದಿದೆ. ಸದನದಲ್ಲಿ ದಾಖಲೆಗಳೊಂದಿಗೆ ಆಡಳಿತ ಪಕ್ಷವನ್ನು ಪ್ರಶ್ನಿಸುತ್ತಿದ್ದ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಜೆಡಿಎಸ್ ಸದನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿತ್ತು. ಆದರೆ, ಅವರು ಈಗ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ಜೆಡಿಎಸ್ ಪಕ್ಷಕ್ಕೆ ಅವರ ಅನುಪಸ್ಥಿತಿ ತೀವ್ರವಾಗಿ ಅನುಭವವಾಗುತ್ತಿದೆ.

ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಅಗತ್ಯ ಸಮಯ ನೀಡಲು ಕುಮಾರಸ್ವಾಮಿಗೆ ಸಾಧ್ಯವಾಗುತ್ತಿಲ್ಲ. ಈ ನಡುವೆ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಆದರೂ, ವಿಧಾನಮಂಡಲದಲ್ಲಿ ಜೆಡಿಎಸ್ ಪಕ್ಷ ಒಗ್ಗಟ್ಟಿನ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಪಕ್ಷದ ಇಂದಿನ ಪರಿಸ್ಥಿತಿಯ ಬಗ್ಗೆ ಕೆಲ ಜೆಡಿಎಸ್ ಶಾಸಕರಲ್ಲೂ ಅಸಮಾಧಾನ ಇದೆ ಎನ್ನಲಾಗುತ್ತಿದರೂ, ಅವರು ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕರೊಬ್ಬರು, “ಕುಮಾರಣ್ಣ ಸದನದಲ್ಲಿ ಹಾಜರಾಗದೇ ಇರಬಹುದು, ಆದರೆ ಸಣ್ಣ ಸಣ್ಣ ವಿಷಯಗಳಿಗೂ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಆದರೂ ಸದನದಲ್ಲಿ ಅವರ ಉಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ.

ಇದೇ ವೇಳೆ ಜೆಡಿಎಸ್ ಎಂಎಲ್ಸಿ ಶರವಣ ಅವರು ಮಾತನಾಡಿ, “ಪಕ್ಷವಾಗಿ ನಾವು ಕುಮಾರಣ್ಣ ಅವರ ಉಪಸ್ಥಿತಿ ಮತ್ತು ಮಾರ್ಗದರ್ಶನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರಿಗೆ ಕೇಂದ್ರ ಸಚಿವರ ಕರ್ತವ್ಯಗಳಿರುವುದರಿಂದ ಸದನಕ್ಕೆ ಬರುವುದು ಸಾಧ್ಯವಾಗುತ್ತಿಲ್ಲ. ಆದರೂ ಪ್ರತಿನಿತ್ಯ ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಆದರೆ ಅಧಿವೇಶನದಲ್ಲಿ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಕುಮಾರಣ್ಣಗೆ ಕುಮಾರಣ್ಣನೇ ಸಾಟಿ” ಎಂದು ಹೇಳಿದ್ದಾರೆ.

ಶಾಸಕ ಶರಣಗೌಡ ಕಂದಕೂರ್ ಮಾತನಾಡಿ, ಉತ್ತರ ಕರ್ನಾಟಕದಿಂದ ಜೆಡಿಎಸ್‌ಗೆ ಹಿಂದಿನಂತೆ ಸಂಖ್ಯಾಬಲ ಇಲ್ಲದಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಸರ್ಕಾರವು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಕಿವಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ರಾಜಕೀಯ ವಿಶ್ಲೇಷಕ ಬಿ.ಎಸ್. ಮೂರ್ತಿ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಾಸಕರ ಸಂಖ್ಯೆ ಕಡಿಮೆಯಾಗಿದ್ದರೂ, ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಕುರಿತು ಪರಿಣಾಮಕಾರಿಯಾಗಿ ಧ್ವನಿ ಎತ್ತಿದ್ದರೆ, ಅದು ಜೆಡಿಎಸ್ ಪಕ್ಷಕ್ಕೆ ರಾಜಕೀಯವಾಗಿ ಲಾಭವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author