40,000 ವಿದ್ಯಾರ್ಥಿಗಳು ಮಿಸ್! ಶಿಕ್ಷಣ ಇಲಾಖೆಗೆ ಬಿಗ್ ಶಾಕ್‌

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಮಹತ್ವದ ಹಂತವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಸುಮಾರು 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪತ್ತೆಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತನಿಖೆ ಆರಂಭಿಸಿದೆ.

ಸ್ಯಾಟ್ಸ್ (ವಿದ್ಯಾರ್ಥಿ ಸಾಧನಾ ನಿಗಾ ವ್ಯವಸ್ಥೆ) ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 8,40,196 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಗೆ ದಾಖಲಾತಿ ಹೊಂದಿದ್ದಾರೆ. ಆದರೆ, ಈ ಪೈಕಿ ಕೇವಲ 7,99,762 ವಿದ್ಯಾರ್ಥಿಗಳು ಮಾತ್ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದಂತೆ 40,434 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂದರೆ, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸುಮಾರು ಶೇ.5 ಮಂದಿ ಪರೀಕ್ಷೆಯಿಂದ ದೂರ ಉಳಿದಿದ್ದಾರೆ.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ–1 ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದೆ. ಪರೀಕ್ಷಾ ನೋಂದಣಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನವೆಂಬರ್ 29ರ ವರೆಗೆ ಗಡುವು ನೀಡಿತ್ತು. ಯಾವುದೇ ಅರ್ಹ ವಿದ್ಯಾರ್ಥಿ ನೋಂದಣಿಯಿಂದ ವಂಚಿತಗೊಳ್ಳಬಾರದು ಎಂಬ ಉದ್ದೇಶದಿಂದ, ಶಾಲೆಗಳು ಮತ್ತು ಪೋಷಕರ ಮನವಿಯ ಮೇರೆಗೆ ನೋಂದಣಿ ಅವಧಿಯನ್ನು ನಾಲ್ಕು ಬಾರಿ ವಿಸ್ತರಿಸಿ ಅಂತಿಮವಾಗಿ ನವೆಂಬರ್ 29ರ ಗಡುವು ನಿಗದಿಪಡಿಸಲಾಗಿತ್ತು.

ನೋಂದಣಿ ಅವಧಿ ಮುಕ್ತಾಯಗೊಂಡ ಬಳಿಕ ಪ್ರೌಢಶಿಕ್ಷಣ ಇಲಾಖೆ ಸ್ಯಾಟ್ಸ್ ದಾಖಲೆಗಳನ್ನು ಪರಿಶೀಲಿಸಿದಾಗ, ಎಸ್‌ಎಸ್‌ಎಲ್‌ಸಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಮತ್ತು ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಗಣನೀಯ ವ್ಯತ್ಯಾಸ ಕಂಡುಬಂದಿದೆ. ಪ್ರತಿ ವರ್ಷ ಸ್ಯಾಟ್ಸ್‌ನಲ್ಲಿ ಹೆಸರು ಇದ್ದರೂ ಪರೀಕ್ಷೆಗೆ ನೋಂದಣಿಯಾಗದ 25 ರಿಂದ 30 ಸಾವಿರ ವಿದ್ಯಾರ್ಥಿಗಳು ಇರುತ್ತಾರೆ ಎಂಬ ವಿಷಯವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿತ್ತು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಪರೀಕ್ಷಾ ಮಂಡಳಿ ನಿರ್ದೇಶಕರು ಸೂಚಿಸಿದ್ದರು.

ಈ ಹಿನ್ನೆಲೆ, ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರಿಗೆ ಪ್ರೌಢಶಿಕ್ಷಣ ನಿರ್ದೇಶಕರು ಮಹತ್ವದ ಸೂಚನೆ ನೀಡಿದ್ದಾರೆ. ಸ್ಯಾಟ್ಸ್‌ನಲ್ಲಿ ಹೆಸರು ಇದ್ದು ಶಾಲೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗದಿರುವ ಕಾರಣವನ್ನು ಪತ್ತೆಹಚ್ಚಬೇಕು. ಜೊತೆಗೆ ಇಂತಹ ವಿದ್ಯಾರ್ಥಿಗಳನ್ನು ಹುಡುಕಿ ಕಡ್ಡಾಯವಾಗಿ ಪರೀಕ್ಷೆಗೆ ನೋಂದಣಿ ಮಾಡಿಸಬೇಕು ಎಂದು ಸೂಚಿಸಲಾಗಿದೆ.

ಉಪನಿರ್ದೇಶಕರು ತಮ್ಮ ಅಧೀನದ ಅಧಿಕಾರಿಗಳಿಗೆ ಶಾಲಾವಾರು ಜವಾಬ್ದಾರಿ ಹಂಚಿಕೆ ಮಾಡಬೇಕು. ಅಧಿಕಾರಿಗಳು ಪರೀಕ್ಷೆಗೆ ನೋಂದಣಿಯಾಗದ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಭೇಟಿ ನೀಡಿ, ಅರ್ಹ ವಿದ್ಯಾರ್ಥಿಗಳ ನೋಂದಣಿಗೆ ತುರ್ತು ಕ್ರಮ ಕೈಗೊಳ್ಳಬೇಕು. ನೋಂದಣಿಯಾಗದ ವಿದ್ಯಾರ್ಥಿಗಳ ಪಟ್ಟಿ, ಕಾರಣ ಮತ್ತು ವಿವರಣೆಯೊಂದಿಗೆ ವರದಿ ತಯಾರಿಸಿ ಶಿಕ್ಷಣ ಇಲಾಖೆ ಮತ್ತು ಕೆಎಸ್‌ಇಎಬಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, “ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸರ್ಕಾರ ಕಠಿಣ ಷರತ್ತು ವಿಧಿಸಿರುವ ಕಾರಣ, ಮಾನ್ಯತೆ ನವೀಕರಣಗೊಳ್ಳದ ಶಾಲೆಗಳ ವಿದ್ಯಾರ್ಥಿಗಳಿಗೆ ನೋ ಆಬ್ಜೆಕ್ಷನ್ ಸರ್ಟಿಫಿಕೆಟ್ (NOC) ದೊರೆಯುತ್ತಿಲ್ಲ. ಈ ಕಾರಣದಿಂದ ಕೆಲ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ” ಎಂದು ಹೇಳಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author