ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿನ ಸ್ಥಿರಾಸ್ತಿ ಮಾಲೀಕರು ‘ಬಿ’ ಖಾತಾದಿಂದ ‘ಎ’ ಖಾತಾಗೆ ವರ್ಗಾವಣೆ ಮಾಡಿಸಿಕೊಳ್ಳಲು ನಿರಾಸಕ್ತಿ ತೋರಿಸುತ್ತಿದ್ದಾರೆ. ನಿಯಮ ಜಾರಿಗೆ ತಂದು ಎರಡು ತಿಂಗಳು ಕಳೆದರೂ ಕೇವಲ 2,819 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿರುವುದು ಸರ್ಕಾರದ ನಿರೀಕ್ಷೆಗೆ ತಣ್ಣೀರು ಎರಚಿದೆ. ಜನರ ನಿರಾಸಕ್ತಿಗೆ ಪ್ರಮುಖ ಕಾರಣವಾಗಿ ಸರ್ಕಾರ ವಿಧಿಸಿರುವ ದುಬಾರಿ ಶುಲ್ಕ ಮತ್ತು ದಂಡ ಮೊತ್ತವೇ ಮೇಲ್ನೋಟಕ್ಕೆ ಕಾಣಿಸುತ್ತಿದೆ.
GBA ವ್ಯಾಪ್ತಿಯಲ್ಲಿ ಪ್ರಸ್ತುತ 8,24,218 ‘ಬಿ’ ಖಾತಾ ಆಸ್ತಿಗಳು ಹಾಗೂ 13,95,191 ‘ಎ’ ಖಾತಾ ಆಸ್ತಿಗಳು ಇವೆ. 2024ರ ಅಕ್ಟೋಬರ್ನಿಂದ ಇ-ಆಸ್ತಿ ತಂತ್ರಾಂಶದ ಮೂಲಕ ಡಿಜಿಟಲ್ ಖಾತಾ ವಿತರಣೆ ಪ್ರಾರಂಭಿಸಲಾಗಿದೆ.
ಇದಕ್ಕೂ ಮೀರಿಸಿ, ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ನೀಡಲು ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರ ಅವಕಾಶ ಕಲ್ಪಿಸಿತ್ತು.
ಅದರಂತೆ ಅಕ್ಟೋಬರ್ 15ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಡಿಸೆಂಬರ್ 1ರವರೆಗೆ ಕೇವಲ 2,819 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಬಿ’ ಖಾತಾದಿಂದ ‘ಎ’ ಖಾತಾಗೆ ವರ್ಗಾವಣೆ ಮಾಡಿದರೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ, ಆಸ್ತಿಯ ಮೌಲ್ಯ ಹೆಚ್ಚಳ ಹಾಗೂ GBAಯಿಂದ ನಿರಾಕ್ಷೇಪಣಾ ಪತ್ರ ಸುಲಭವಾಗಿ ಸಿಗಲಿದೆ ಎಂದು ಸರ್ಕಾರ ಭರವಸೆ ನೀಡಿತ್ತು.
ಆದರೆ ಅರ್ಜಿ ಶುಲ್ಕವಾಗಿ 500 ರೂ. ಮತ್ತು ಮಾರ್ಗಸೂಚಿ ಮೌಲ್ಯದ ಮೇಲೆ ಶೇ.5 ದಂಡ ಪಾವತಿಸುವಂತೆ ಸೂಚಿಸಲಾಗಿತ್ತು. ಅಂದರೆ, 1 ಕೋಟಿ ರೂ. ಮೌಲ್ಯದ ಆಸ್ತಿಗೆ ಸುಮಾರು 5 ಲಕ್ಷ ರೂ. ದಂಡ ಪಾವತಿ ಮಾಡಬೇಕಾದ ಸ್ಥಿತಿ ಎದುರಾಗಿತ್ತು. ಈ ದುಬಾರಿ ಮೊತ್ತವೇ ಆಸ್ತಿ ಮಾಲೀಕರನ್ನು ಅರ್ಜಿ ಸಲ್ಲಿಕೆಯಿಂದ ದೂರ ಇಡುತ್ತಿದೆ.
ದುಬಾರಿ ದಂಡದ ವಿರುದ್ಧ ಪ್ರತಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದರಿಂದಲೂ ಜನರು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಲ್ಲದೆ, ಅಕ್ರಮ–ಸಕ್ರಮ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ಲಕ್ಷಾಂತರ ರೂ. ದಂಡ ಪಾವತಿಸಿದ ಬಳಿಕ ಭವಿಷ್ಯದಲ್ಲಿ ಸಮಸ್ಯೆ ಎದುರಾದರೆ ಎಂಬ ಆತಂಕವೂ ಜನರಲ್ಲಿ ಮನೆಮಾಡಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇ-ಆಸ್ತಿಯ ದೋಷಗಳನ್ನು ಸರಿಪಡಿಸಿ ಇ-ಖಾತಾ ವೇಗವಾಗಿ ವಿತರಣೆ ಮಾಡುವುದು. ಮಾರ್ಗಸೂಚಿ ದರದ ಮೇಲಿನ ಶೇ.5 ದಂಡ ಇಳಿಕೆ ಅಗತ್ಯವಾಗಿದೆ. ‘ಎ’ ಖಾತಾಗೆ ವರ್ಗಾವಣೆ ಆಗುವವರಿಗೆ ಮತ್ತಷ್ಟು ಅನುಕೂಲ ಒದಗಿಸುವುದು. ಅಕ್ರಮ-ಸಕ್ರಮದ ಬಗ್ಗೆ ಆಸ್ತಿ ವಾರಸುದಾರರಿಗೆ ಸ್ಪಷ್ಟತೆ ನೀಡುವುದು ಇವು ಜನರ ಸೆಳೆಯಲು ಬೇಕಾದ ಪರಿಹಾರಗಳು ಕ್ರಮಗಳು.
2024ರ ಅಕ್ಟೋಬರ್ನಿಂದ ಜಿಬಿಎ ಸೇರಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ವರ್ಷ ಕಳೆದರೂ ಇ-ಆಸ್ತಿ ಸಾಫ್ಟ್ವೇರ್ನ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.
ವರದಿ : ಲಾವಣ್ಯ ಅನಿಗೋಳ



