1) ಭಾರತ-ಜೋರ್ಡಾನ್ ಮಧ್ಯೆ ಒಪ್ಪಂದಕ್ಕೆ ಸಹಿ

ಪ್ರಧಾನಿ ನರೇಂದ್ರ ಮೋದಿ ಜೋರ್ಡಾನ್ ಭೇಟಿಯು ಎರಡೂ ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡಿದೆ. ಈ ಭೇಟಿಯ ಸಮಯದಲ್ಲಿ, ಭಾರತ ಮತ್ತು ಜೋರ್ಡಾನ್ ನಡುವೆ ಇಂಧನ, ನೀರು ನಿರ್ವಹಣೆ, ಸಂಸ್ಕೃತಿ, ಪರಂಪರೆ ಸಂರಕ್ಷಣೆ ಮತ್ತು ಡಿಜಿಟಲ್ ಸಹಕಾರದಂತಹ ಕ್ಷೇತ್ರಗಳನ್ನು ಒಳಗೊಂಡ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ಒಪ್ಪಂದಗಳು ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೋರ್ಡಾನ್ ಭೇಟಿಯ ಸಂದರ್ಭದಲ್ಲಿ ದೊರೆ ಅಬ್ದುಲ್ಲಾ 2 ಬಿನ್ ಅಲ್ ಹುಸೇನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪ್ರಧಾನಿ ಮೋದಿ ಅವರು ಅಮ್ಮನ್‌ನ ಹುಸೇನಿಯಾ ಅರಮನೆಗೆ ಆಗಮಿಸಿದಾಗ, ರಾಜ ಅಬ್ದುಲ್ಲಾ 2 ಅವರು ಮೋದಿಗೆ ಆತ್ಮೀಯ ಸ್ವಾಗತ ನೀಡಿದರು. ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರನ್ನು ಅಮ್ಮನ್‌ನ ಹೋಟೆಲ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರು ಸಹ ಆತ್ಮೀಯವಾಗಿ ಸ್ವಾಗತಿಸಿದರು.
ಸಭೆಯ ಸಮಯದಲ್ಲಿ, ಪ್ರಧಾನಿ ಮೋದಿ ಭಯೋತ್ಪಾದನೆಯನ್ನು ಜಂಟಿಯಾಗಿ ಎದುರಿಸುವ ಬಗ್ಗೆ ವಿಶೇಷ ಒತ್ತು ನೀಡಿದರು. ಗಾಜಾದಲ್ಲಿ ಜೋರ್ಡಾನ್‌ನ ಸಕ್ರಿಯ ಮತ್ತು ಸಕಾರಾತ್ಮಕ ಪಾತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಭರವಸೆ ವ್ಯಕ್ತಪಡಿಸಿದರು. ಪೆಟ್ರಾ ಮತ್ತು ಎಲ್ಲೋರಾ ನಡುವಿನ ಅವಳಿ ಒಪ್ಪಂದವು ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ವಿನಿಮಯಕ್ಕೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಮೋದಿ ಹೇಳಿದರು.
2) ಆಸ್ಟ್ರೇಲಿಯಾದ ಹೀರೋ ಆದ ಹಣ್ಣು ವ್ಯಾಪಾರಿ!

ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್ನಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಗುಂಡಿನ ಸುರಿಮಳೆಗೈದ ಪರಿಣಾಮ 12ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಭಯಪಡದೆ ನಿರಾಯುಧನಾಗಿ ಉಗ್ರನ ವಿರುದ್ಧ ಹೋರಾಡಿದ್ದು, ಓರ್ವ ಹಣ್ಣುಗಳ ಮಾರಾಟಗಾರ. ಅವರ ಹೆಸರು ಅಹ್ಮದ್ ಅಲ್ ಅಹ್ಮದ್. ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಪ್ರಾಣ ಒತ್ತೆ ಇಟ್ಟು ಜನರನ್ನು ರಕ್ಷಣೆ ಮಾಡಿದ್ದಾರೆ. ಉಗ್ರನ ಮೇಲೆ ಹಾರಿ ಬಂದೂಕನ್ನು ಕಸಿದುಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಇವರದ್ದೇ ವಿಡಿಯೋ ಹರಿದಾಡಿತ್ತು. ಈ ಸಂದರ್ಭದಲ್ಲಿ ಅವರಿಗೂ ಕೂಡ ಗಾಯಗಳಾಗಿತ್ತು.
ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.GoFundMe ಅಭಿಯಾನವು ಅಹ್ಮದ್‌ಗಾಗಿ ಸುಮಾರು 2 ಮಿಲಿಯನ್ ಡಾಲರ್ ಸಂಗ್ರಹಿಸಿದೆ. 33,000 ಕ್ಕೂ ಹೆಚ್ಚು ಜನರು ಕೊಡುಗೆ ನೀಡಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ದಾಳಿಕೋರರನ್ನು ಸಾಜಿದ್ ಅಕ್ರಮ್ (50) ಮತ್ತು ಅವರ ಮಗ ನವೀದ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದ್ದರು. ನಿಲ್ಲಿಸಿದ್ದ ಕಾರಿನ ಹಿಂದೆ ಅಡಗಿಕೊಂಡಿದ್ದ ಅಹ್ಮದ್, ಗುಂಡು ಹಾರಿಸಿದವರಲ್ಲಿ ಒಬ್ಬನ ಮೇಲೆ ದಾಳಿ ಮಾಡಿ, ಅವನ ಕೈಯಿಂದ ರೈಫಲ್ ಅನ್ನು ಕಸಿದುಕೊಂಡಿದ್ದರು. ಅಹ್ಮದ್ ಅವರ ಧೈರ್ಯಶಾಲಿ ಕಾರ್ಯಕ್ಕಾಗಿ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿತ್ತು.
43 ವರ್ಷದ ಅಹ್ಮದ್ ಅಲ್ ಅಹ್ಮದ್ ಸಿಡ್ನಿಯ ಸದರ್ಲ್ಯಾಂಡ್ ಪ್ರದೇಶದಲ್ಲಿ ಹಣ್ಣಿನ ಅಂಗಡಿ ನಡೆಸುತ್ತಿದ್ದಾರೆ.ದಾಳಿಯ ಸಮಯದಲ್ಲಿ ಅವರು ಆಕಸ್ಮಿಕವಾಗಿ ಬೋಂಡಿ ಬೀಚ್ ಬಳಿ ಇದ್ದರು. ಹಠಾತ್ ಗುಂಡಿನ ಸದ್ದು ಕೇಳಿ ಜನರು ಓಡಿಹೋಗಲು ಪ್ರಾರಂಭಿಸಿದರು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅಹ್ಮದ್, ಯಾವುದೇ ಆಯುಧವಿಲ್ಲದೆ ದಾಳಿಕೋರನನ್ನು ನೇರವಾಗಿ ಎದುರಿಸಲು ನಿರ್ಧರಿಸಿದರು. ಅವರಿಗೆ ಎರಡು ಬಾರಿ ಗುಂಡು ಹಾರಿಸಲಾಯಿತು, ಆದರೆ ಭಯ ಪಡುವ ಬದಲು ಅವರು ದಾಳಿಕೋರನನ್ನು ಎದುರಿಸಿ ಅವನ ಆಯುಧವನ್ನು ಕಸಿದುಕೊಂಡಿದ್ದಾರೆ.
3) “ಜಮ್ಮುಕಾಶ್ಮೀರ ಭಾರತದ ಅವಿಭಾಜ್ಯ ಅಂಗ”

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಂತಿಗಾಗಿ ನಾಯಕತ್ವದ ಕುರಿತು ನಡೆದ ಮುಕ್ತ ಚರ್ಚೆಯಲ್ಲಿ ಭಾರತ ಜಮ್ಮು ಮತ್ತು ಕಾಶ್ಮೀರ ತನ್ನ ಭೂಭಾಗ ಎಂಬ ಪಾಕಿಸ್ತಾನದ ಉಲ್ಲೇಖವನ್ನು ತಿರಸ್ಕರಿಸಿದ್ದು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂದು ಪುರುಚ್ಚರಿಸಿದೆ. ಇದೇ ವೇಳೆ ಪಾಕಿಸ್ತಾನದಲ್ಲಿ 27ನೇ ತಿದ್ದುಪಡಿ ಕುರಿತು ಉಲ್ಲೇಖಿಸಿ ಪಾಕ್ ಆಸೀಮ್ ಮುನಿರ್ ಗೆ ಲೈಫ್ ಟೈಮ್ ಇಮ್ಯೂನಿಟಿ ನೀಡಿದೆ ಎಂದು ಟೀಕಿಸಿದೆ.
ಇಂದಿನ ಮುಕ್ತ ಚರ್ಚೆಯಲ್ಲಿ ಪಾಕಿಸ್ತಾನದ ಅನಗತ್ಯ ಉಲ್ಲೇಖವು ಭಾರತ ಮತ್ತು ಅದರ ಜನರನ್ನು ಹಾನಿ ಮಾಡುವ ಅದರ ಅಪಕ್ವ ಗಮನವನ್ನು ಸಾಬೀತುಪಡಿಸುತ್ತದೆ. ವಿಶ್ವಸಂಸ್ಥೆಯ ಎಲ್ಲಾ ಸಭೆಗಳು ಮತ್ತು ವೇದಿಕೆಗಳಲ್ಲಿ ತನ್ನ ವಿಭಜನಾ ಅಜೆಂಡಾವನ್ನು ಮುಂದುವರಿಸಲು ಆಯ್ಕೆ ಮಾಡುವ ಭದ್ರತಾ ಮಂಡಳಿಯ ಸೇವೆ ಸಲ್ಲಿಸುತ್ತಿರುವ ಪಾಕಿಸ್ತಾನ ತನಗೆ ಗೊತ್ತುಪಡಿಸಿದ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಪೂರೈಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದೇ ವೇಳೆ, ಪಾಕಿಸ್ತಾನದ ಆಂತರಿಕ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಇಚ್ಛಾಶಕ್ತಿಯನ್ನು ಹತ್ತಿಕ್ಕುವ ವಿಶಿಷ್ಟಿ ನೀತಿಯನ್ನು ಟೀಕಿಸಿದ್ದಾರೆ. ಪಾಕಿಸ್ತಾನವು ತನ್ನ ಜನರ ಇಚ್ಛೆಯನ್ನು ಗೌರವಿಸುವ ವಿಶಿಷ್ಟ ಮಾರ್ಗವನ್ನು ಹೊಂದಿದೆ ಎಂದು ಹೇಳಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಹಾಕುವುದು, ಆಡಳಿತ ಪಕ್ಷವನ್ನು ನಿಷೇಧಿಸುವುದು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ಆಸೀಮ್ ಮುನೀರ್ ಅವರಿಗೆ ಜೀವಮಾನದ ವಿನಾಯಿತಿ ನೀಡಲು 27 ನೇ ತಿದ್ದುಪಡಿಯ ಮೂಲಕ ಸಾಂವಿಧಾನಿಕ ದಂಗೆ ನಡೆಸುತ್ತಿದ್ದಾರೆ ಹರೀಶ್ ವ್ಯಂಗಮಾಡಿದ್ದಾರೆ.
ಹಾಗಾಗಿ ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಇತರ ಎಲ್ಲಾ ರೀತಿಯ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ಹಿಂಪಡದು ಸಂಪೂರ್ಣವಾಗಿ ಕೊನೆಗೊಳಿಸುವವರೆಗೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲು ಭಾರತ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
4) ನೆಲಕ್ಕುರುಳಿದ ಬ್ರೆಜಿಲ್‌ನ ಸ್ವಾತಂತ್ರ್ಯ ಪ್ರತಿಮೆ!

ಚಂಡಮಾರುತದ ತೀವ್ರ ಅಬ್ಬರಕ್ಕೆ ಸಿಲುಕಿ ಬ್ರೆಜಿಲ್‌ನ ಸ್ವಾಂತತ್ರ ಪ್ರತಿಮೆ ಉರುಳಿ ಬಿದ್ದಂತಹ ಘಟನೆ ನಡೆದಿದೆ. ನಿನ್ನೆ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದ ಗುವಾಬಾ ನಗರದಲ್ಲಿ ತೀವ್ರ ಚಂಡಮಾರುತ ಅಪ್ಪಳಿಸಿದ್ದು, ಇದರ ಪರಿಣಾಮ ಇಲ್ಲಿನ ಹವಾನ್ ಮೆಗಾಸ್ಟೋರ್‌ನ ಹೊರಗೆ ಸ್ಥಾಪಿಸಲಾಗಿದ್ದ 24 ಮೀಟರ್ ಎತ್ತರದ ಸ್ವಾತಂತ್ರ ಪ್ರತಿಮೆ ಕುಸಿದು ಬಿದ್ದಿದೆ. ಈ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಬ್ರೆಜಿಲ್‌ನ ನಾಗರಿಕ ರಕ್ಷಣಾ ಪ್ರಾಧಿಕಾರವಾದ ಡೆಫೆಸಾ ಸಿವಿಲ್ ಪ್ರಕಾರ ಚಂಡಮಾರುತವು ಗಾಳಿಯ ವೇಗವನ್ನು ಗಂಟೆಗೆ 90 ಕಿ.ಮೀ.ಗೆ ಹೆಚ್ಚಿಸಿತ್ತು. ಪರಿಣಾಮ ಸ್ವಾತಂತ್ರ ಪ್ರತಿಮೆ ನೆಲಕ್ಕುರುಳಿದೆ. ಈ ಪ್ರತಿಮೆಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. 11 ಮೀಟರ್ ಎತ್ತರದ ಕಾಂಕ್ರೀಟ್ ಅಡಿಪಾಯದ ಮೇಲೆ ಈ ಸ್ವಾತಂತ್ರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ ಬಿರುಗಾಳಿಯಿಂದಾಗಿ ಅದರ ಮೇಲೆ ನಿಲ್ಲಿಸಿದ್ದ ಸ್ವಾತಂತ್ರ ಪ್ರತಿಮೆ ಉರುಳಿ ಬಿದ್ದರೂ ಅದನ್ನು ಸ್ಥಾಪಿಸಿದ ಕಾಂಕ್ರೀಟ್ ಅಡಿಪಾಯಕ್ಕೆ ಯಾವುದೇ ಯಾವುದೇ ಹಾನಿಯಾಗಿಲ್ಲ.
ಘಟನೆಯಿಂದ ಯಾವುದೇ ಜೀವಾಪಾಯ ಸಂಭವಿಸಿಲ್ಲ. ಆದರೆ ಸ್ವಾತಂತ್ರ ಪ್ರತಿಮೆ ಕೈಗಳು ಮುರಿದು ಹೋಗಿವೆ. ಆ ಪ್ರದೇಶದಲ್ಲಿ ಬಿರುಗಾಳಿ ತೀವ್ರಗೊಳ್ಳುತ್ತಿದ್ದಂತೆ ಪ್ರತ್ಯಕ್ಷದರ್ಶಿಗಳು ಮತ್ತುಅಲ್ಲಿನ ಅಂಗಡಿಗಳ ನೌಕರರು ಎಚ್ಚೆತ್ತುಕೊಂಡು ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಆ ಪ್ರದೇಶದಿಂದ ದೂರಕ್ಕೆ ಸ್ಥಳಾಂತರಿಸಿದರು, ಇದು ಸಂಭವನೀಯ ನಷ್ಟಗಳನ್ನು ತಪ್ಪಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ ಸ್ವಾತಂತ್ರ ಪ್ರತಿಮೆಯೂ ನಿಧಾನವಾಗಿ ಕೆಳಗೆ ಬಾಗಿ ಪಾರ್ಕಿಂಗ್ ಸ್ಥಳಕ್ಕೆ ಅಪ್ಪಳಿಸುವುದನ್ನು ಕಾಣಬಹುದು.
ಬ್ರೆಜಿಲ್‌ನ ದಕ್ಷಿಣ ಪ್ರದೇಶವನ್ನು ಚಂಡಮಾರುತವು ಬೀಸುವ ಮೊದಲು ಅಧಿಕಾರಿಗಳು ತೀವ್ರ ಹವಾಮಾನ ಎಚ್ಚರಿಕೆಗಳನ್ನು ನೀಡಿದ್ದರು. ಸಂಭಾವ್ಯ ಅಪಾಯಗಳ ಬಗ್ಗೆ ನಿವಾಸಿಗಳು ಎಚ್ಚರದಿಂದಿರುವಂತೆ ಸೂಚಿಸಿದ್ದರು. ನಗರದಲ್ಲಿ ಗಾಳಿಯಿಂದ ಹಾನಿಯಾದ ಮೊದಲ ವರದಿಗಳ ನಂತರ ನಾಗರಿಕ ರಕ್ಷಣಾ ಮತ್ತು ಮೂಲಸೌಕರ್ಯ ಕಾರ್ಯದರ್ಶಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದರು. ಬಿದ್ದ ಸ್ವಾತಂತ್ರ ಪ್ರತಿಮೆಯು ಹವಾನ್ ಪ್ರದೇಶದ ಹೆಗ್ಗುರುತಾಗಿದ್ದು, ಅದರ ಎತ್ತರ ಮತ್ತು ಪ್ರಾಮುಖ್ಯತೆಯಿಂದಾಗಿ ದೂರದಿಂದಲೇ ಗೋಚರಿಸುತ್ತಿತ್ತು.
5) ಅಬುಧಾಬಿನಲ್ಲಿ IPL ಮಿನಿ ಹರಾಜು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಬಹು ನಿರೀಕ್ಷಿತ ಮಿನಿ ಹರಾಜು ಯುಎಇಯ ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ಆರಂಭಗೊಂಡಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಆರಂಭವಾದ ಹರಾಜಿನಲ್ಲಿ, ಮುಂದಿನ ಸೀಸನ್‌ಗಾಗಿ 10 ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸಲು ತೀವ್ರ ಬಿಡ್ಡಿಂಗ್ ಯುದ್ಧದಲ್ಲಿ ತೊಡಗಿವೆ. ಈ ಬಾರಿಯ ಐಪಿಎಲ್ ಹರಾಜು ಭಾರೀ ಪೈಪೈಟಿಗೆ ಸಾಕ್ಷಿಯಾಗಿದೆ.
ಹರಾಜಿನ ಆರಂಭಿಕ ಹಂತದಲ್ಲೇ ಆಸ್ಟ್ರೇಲಿಯಾದ ಆಲ್-ರೌಂಡರ್ ಕ್ಯಾಮರೂನ್ ಗ್ರೀನ್ ಭಾರಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಗ್ರೀನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 25.20 ಕೋಟಿ ರೂ. ಗೆ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಮೂರನೇ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಗ್ರೀನ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2 ಕೋಟಿ ರೂ. ಮೂಲಬೆಲೆಯೊಂದಿಗೆ ಆರಂಭವಾದ ಗ್ರೀನ್ ಬಿಡ್ಡಿಂಗ್, ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವೆ ತೀವ್ರ ಪೈಪೋಟಿ ಕಂಡಿತು. ನಂತರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆ.ಕೆ.ಆರ್. ನಡುವಿನ ಜಿದ್ದಾಜಿದ್ದಿನಿಂದಾಗಿ ಬಿಡ್ಡಿಂಗ್ 20 ಕೋಟಿ ರೂ. ಗಡಿ ದಾಟಿ, ಅಂತಿಮವಾಗಿ KKR ತಂಡವು 25.20 ಕೋಟಿ ರೂ.ಗೆ ಗ್ರೀನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಕೆಳೆದ ಬಾರಿ ದಾಖಲೆಯ 23 ಕೋಟಿ ರೂ.ಗಳಿಗೆ ಕೋಲ್ಕತಾ ತಂಡದ ಪಾಲಾಗಿದ್ದು, ಭಾರತ ತಂಡದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೇಂಗಳೂರು ತಂಡ 7 ಕೋಟಿ ರೂ.ಗಳಿಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.
ವರದಿ : ಲಾವಣ್ಯ ಅನಿಗೋಳ




