ಉಚಿತ ಕಿಡ್ನಿ ದಾನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ಯಾವುದೇ ಪ್ರತಿಫಲ ಬಯಸದೆ ಕಿಡ್ನಿ ದಾನ ಮಾಡಲು ಮುಂದಾಗಿದ್ದ ಬೆಂಗಳೂರಿನ ವೈದ್ಯೆಯೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಅನುಮತಿ ನೀಡಿದೆ. ಆಸ್ಪತ್ರೆ ಹಾಗೂ ಅಂಗಾಂಗ ಕಸಿ ಸಮಿತಿ ಅವಕಾಶ ನೀಡಿರಲಿಲ್ಲ ಎಂಬ ಕಾರಣದಿಂದ ವೈದ್ಯೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅಪರೂಪದ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ವೈದ್ಯೆಯ ಮನವಿಯನ್ನು ಪುರಸ್ಕರಿಸಿದೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ತನ್ನ ಕಿಡ್ನಿ ದಾನ ಮಾಡಲು ವೈದ್ಯೆ ಮುಂದಾಗಿದ್ದರು. ಆದರೆ ಯಾವುದೇ ಹಣಕಾಸು ಪ್ರತಿಫಲವಿಲ್ಲದೆ ದಾನ ಮಾಡಲು ಒಪ್ಪಿಕೊಂಡಿದ್ದರೂ, ಅಂಗಾಂಗ ಕಸಿ ಸಮಿತಿ ಈ ಮನವಿಗೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ವೈದ್ಯೆ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ವೈದ್ಯೆಯ ಅರ್ಜಿಯನ್ನು ಪುರಸ್ಕರಿಸಿ, ಅಂಗಾಂಗ ಕಸಿ ಸಮಿತಿಗೆ ಮಹತ್ವದ ಸೂಚನೆ ನೀಡಿದೆ. ಮೊದಲಿಗೆ ಕಿಡ್ನಿ ದಾನ ಪಡೆಯಲು ಅರ್ಹರಾದ ರೋಗಿಗಳ ಪಟ್ಟಿ ಪರಿಶೀಲನೆ ನಡೆಸಬೇಕು ಎಂದು ಕೋರ್ಟ್ ಸೂಚಿಸಿದೆ.

ಸಮಿತಿಯು ಹೈಕೋರ್ಟ್‌ಗೆ ನೀಡಿದ ಮಾಹಿತಿಯಂತೆ, ವೈದ್ಯೆ ಕಿಡ್ನಿ ದಾನಕ್ಕೆ ವೈದ್ಯಕೀಯವಾಗಿ ಅರ್ಹರಾಗಿದ್ದು, ಸದ್ಯ ಕಿಡ್ನಿ ಕಸಿಗಾಗಿ ಐವರು ರೋಗಿಗಳು ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ವೈದ್ಯಕೀಯ ಹಾಗೂ ಕಾನೂನು ಪರಿಶೀಲನೆ ನಡೆಸಿ, ಅರ್ಹ ರೋಗಿಯನ್ನು ಆಯ್ಕೆ ಮಾಡಿ ಬಳಿಕ ವೈದ್ಯೆಯ ದಾನ ಅರ್ಜಿಯನ್ನು ಪರಿಗಣಿಸುವಂತೆ ಕೋರ್ಟ್ ಆದೇಶಿಸಿದೆ.

ಯಾವುದೇ ರೀತಿಯ ಲಾಭ ಅಥವಾ ಪರಿಹಾರ ನಿರೀಕ್ಷಿಸದೆ, ಸಂಪೂರ್ಣ ಉಚಿತವಾಗಿ ಕಿಡ್ನಿ ದಾನ ಮಾಡಲು ವೈದ್ಯೆ ಮುಂದಾಗಿರುವುದು ಅಪರೂಪದ ವಿಚಾರವಾಗಿದ್ದು, ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ತೀರ್ಪು ಮಹತ್ವ ಪಡೆದುಕೊಂಡಿದೆ.

ವರದಿ : ಲಾವಣ್ಯ ಅನಿಗೋಳ

About The Author