1.60 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ”ಅತಂತ್ರ”

ರಾಜ್ಯದಲ್ಲಿ ಪದವಿಪೂರ್ವ, ಸ್ನಾತಕ ಹಾಗೂ ಸ್ನಾತಕೋತ್ತರ ಹಂತದ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗಂಭೀರ ಸಮಸ್ಯೆ ಎದುರಾಗಿದೆ. ಅನುದಾನದ ಕೊರತೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 1.60 ಲಕ್ಷ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಯಾಗದೆ ಬಾಕಿಯಾಗಿದೆ.

ಇದರಿಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸುವುದೇ ಕಷ್ಟವಾಗುವ ಆತಂಕ ಎದುರಿಸುತ್ತಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಶುಲ್ಕ ಮರುಪಾವತಿ, ವಾರ್ಷಿಕ ₹15,000 ಮೊತ್ತದ ‘ವಿದ್ಯಾಸಿರಿ’ ಯೋಜನೆ, ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ವಾರ್ಷಿಕ ₹4,000 ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

2023–24ನೇ ಸಾಲಿನಲ್ಲಿ 7,40,010 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರೂ, ಸರ್ಕಾರ ಕೇವಲ 7,08,597 ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ಪಾವತಿಸಿದೆ. 2024–25ನೇ ಸಾಲಿನಲ್ಲಿ 6,51,767 ಅರ್ಹ ವಿದ್ಯಾರ್ಥಿಗಳಲ್ಲಿ 5,23,318 ವಿದ್ಯಾರ್ಥಿಗಳಿಗೆ ಮಾತ್ರ ವೇತನ ಲಭಿಸಿದೆ. ಈ ಮೂಲಕ ಕಳೆದ ಎರಡು ವರ್ಷಗಳಲ್ಲಿ ಒಟ್ಟು 1,59,862 ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ.

ಈ ಸಮಸ್ಯೆ ಕಳೆದ ಐದು ವರ್ಷಗಳಿಂದಲೂ ಮುಂದುವರಿದಿದ್ದು, ಅನೇಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ನಿರೀಕ್ಷೆಯನ್ನೇ ಕೈಬಿಟ್ಟಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಐದು ವರ್ಷಗಳಿಂದಲೂ ವಿದ್ಯಾರ್ಥಿ ವೇತನ ಲಭಿಸಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಶುಲ್ಕ ಮರುಪಾವತಿಗೆ ಅನುದಾನದ ಸಮಸ್ಯೆ ಎದುರಾಗಿದೆ. ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಇಲಾಖೆ ವಿದ್ಯಾರ್ಥಿ ವೇತನ ಪಾವತಿಗೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಕುಟುಂಬದ ಆದಾಯ ಮಿತಿ, ಶೇ.60 ಅಥವಾ ಶೇ.70 ಅಂಕಗಳ ಅರ್ಹತೆ, ಪ್ರವರ್ಗ 1, 2ಎ, 3ಎ ಮತ್ತು 3ಬಿ ವರ್ಗಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಅನ್ವಯಿಸಲಾಗಿದೆ. ಇದರಿಂದ ಎಲ್ಲ ಅರ್ಜಿಗಳು ಮಂಜೂರಾಗುವುದಿಲ್ಲ.

2023–24ರಲ್ಲಿ 8,04,148 ಅರ್ಜಿಗಳಲ್ಲಿ 64,138 ಅರ್ಜಿಗಳು ತಿರಸ್ಕೃತಗೊಂಡಿದ್ದರೆ, 2024–25ರಲ್ಲಿ 8,13,286 ಅರ್ಜಿಗಳಲ್ಲಿ 1,61,519 ಅರ್ಜಿಗಳು ತಿರಸ್ಕೃತವಾಗಿವೆ. 2025–26ನೇ ಸಾಲಿಗೆ ಇದುವರೆಗೆ 5.01 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಡಿಸೆಂಬರ್ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಅರ್ಹತೆಯಿದ್ದರೂ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author