39 ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ‘ನೋ ಎಂಟ್ರಿ’

ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತಾ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಪ್ರಯಾಣ ನಿಷೇಧ ಮತ್ತು ನಿರ್ಬಂಧಗಳ ಪಟ್ಟಿಗೆ ಇನ್ನೂ 20 ದೇಶಗಳನ್ನು ಸೇರಿಸಿದೆ. ಈ ಮೂಲಕ ಒಟ್ಟು 39 ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಸಂಬಂಧ ಅಧ್ಯಕ್ಷ ಟ್ರಂಪ್ ಆದೇಶಕ್ಕೆ ಸಹಿ ಹಾಕಿದ್ದು, ಅದರನ್ವಯ ನೈಜೀರಿಯಾ, ಟೋಂಗಾ ಸೇರಿದಂತೆ 20 ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಹೊಸ ಆದೇಶದ ಪ್ರಕಾರ,
ಬುರ್ಕಿನಾ ಫಾಸೊ, ಮಾಲಿ, ನೈಜರ್, ದಕ್ಷಿಣ ಸುಡಾನ್, ಸಿರಿಯಾ, ಅಂಗೋಲಾ, ಆಂಟಿಗುವಾ ಮತ್ತು ಬಾರ್ಬುಡಾ, ಬೆನಿನ್, ಕೋಟ್ ಡಿ ಐವೊಯರ್, ಡೊಮಿನಿಕಾ, ಗ್ಯಾಬೊನ್, ಗ್ಯಾಂಬಿಯಾ, ಮಲಾವಿ, ಮೌರಿಟಾನಿಯಾ, ಸೆನೆಗಲ್, ಟಾಂಜಾನಿಯಾ, ಜಾಂಬಿಯಾ, ಜಿಂಬಾಬ್ವೆ, ಹಾಗೂ ಪ್ಯಾಲೆಸ್ಟೇನಿಯನ್ ಪ್ರಾಧಿಕಾರ ನೀಡಿದ ಪ್ರಯಾಣ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳ ಮೇಲೂ ನಿರ್ಬಂಧ ಜಾರಿಯಲ್ಲಿರಲಿದೆ.

ಇದೇ ವೇಳೆ, ಈ ಹಿಂದೆ ಬುರುಂಡಿ, ಕ್ಯೂಬಾ, ಟೋಗೊ ಮತ್ತು ವೆನೆಜುವೆಲಾ ಪ್ರಜೆಗಳ ಮೇಲೆ ವಿಧಿಸಲಾಗಿದ್ದ ಭಾಗಶಃ ನಿರ್ಬಂಧವನ್ನು ಟ್ರಂಪ್ ಆಡಳಿತ ಮುಂದುವರಿಸಿದೆ. ಅಲ್ಲದೆ, ಲಾವೋಸ್, ಸಿಯೆರಾ ಲಿಯೋನ್, ಅಫ್ಘಾನಿಸ್ತಾನ, ಬರ್ಮಾ, ಚಾಡ್, ಕಾಂಗೋ ಗಣರಾಜ್ಯ, ಈಕ್ವೆಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮೆನ್ ದೇಶಗಳ ಪ್ರಜೆಗಳ ಮೇಲಿನ ಪೂರ್ಣ ಪ್ರವೇಶ ನಿರ್ಬಂಧವೂ ಮುಂದುವರಿಯಲಿದೆ.

ಆದರೆ ಈ ಆದೇಶದಲ್ಲಿ ಕೆಲವೊಂದು ವಿನಾಯಿತಿಗಳನ್ನೂ ನೀಡಲಾಗಿದೆ. ಕಾನೂನುಬದ್ಧ ಶಾಶ್ವತ ನಿವಾಸಿಗಳು, ಗ್ರೀನ್ ಕಾರ್ಡ್ ಹೊಂದಿರುವವರು, ಈಗಾಗಲೇ ಮಾನ್ಯ ವೀಸಾ ಹೊಂದಿರುವವರು, ಕ್ರೀಡಾಪಟುಗಳು ಹಾಗೂ ರಾಜತಾಂತ್ರಿಕ ವೀಸಾ ಹೊಂದಿರುವವರು ಈ ನಿರ್ಬಂಧದಿಂದ ಹೊರತಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ಅಮೆರಿಕ ಸರ್ಕಾರದ ಈ ಕ್ರಮ ಜಾಗತಿಕ ಮಟ್ಟದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದ್ದು, ಭದ್ರತಾ ಕಾರಣಗಳ ನೆಪದಲ್ಲಿ ಜಾರಿಗೆ ತಂದಿರುವ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವರದಿ : ಲಾವಣ್ಯ ಅನಿಗೋಳ

About The Author