ಪ್ರಕಾಶ್ ವೀರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಕಳೆದ ಡಿಸೆಂಬರ್ 11ರಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಬಿಡುಗಡೆಯಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ, ಬಿಡುಗಡೆಯ ಮೊದಲ ದಿನವೇ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿ ಸಿನಿಪ್ರೇಮಿಗಳ ಗಮನ ಸೆಳೆದಿತ್ತು.
ಆದರೆ ವಾರದ ಮಧ್ಯಭಾಗದಲ್ಲಿ ಚಿತ್ರದ ಕಲೆಕ್ಷನ್ನಲ್ಲಿ ಸಹಜ ಕುಸಿತ ಕಂಡುಬಂದಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘ದಿ ಡೆವಿಲ್’ ತನ್ನ ಏಳನೇ ದಿನವಾದ ಮೊದಲ ಬುಧವಾರ 0.80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿನ ದಿನವಾದ ಮೊದಲ ಮಂಗಳವಾರ ಚಿತ್ರ 1.05 ಕೋಟಿ ರೂಪಾಯಿ ಗಳಿಸಿತ್ತು. ಈವರೆಗೂ ಏಳು ದಿನಗಳ ಪ್ರದರ್ಶನದಲ್ಲಿ ಚಿತ್ರ ಒಟ್ಟು 24.50 ಕೋಟಿ ರೂಪಾಯಿ ಗಳಿಕೆ ದಾಖಲಿಸಿದೆ. ವಾರದ ದಿನಗಳಲ್ಲಿ ಕಲೆಕ್ಷನ್ ಕುಗ್ಗುವುದು ಸಹಜವಾಗಿದ್ದು, ಚಿತ್ರತಂಡ ಹಾಗೂ ಅಭಿಮಾನಿಗಳು ವಾರಾಂತ್ಯದ ಗಳಿಕೆಯಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನು ‘ದಿ ಡೆವಿಲ್’ ಸಿನಿಮಾದಲ್ಲಿ ಬಳಸಿರುವ ವಿಶೇಷ ಚೇರ್ ಈಗಾಗಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳಿಗಾಗಿ ಈ ಅದ್ಧೂರಿ ಚೇರ್ ಅನ್ನು ಬೆಂಗಳೂರಿನ ಪ್ರಸಿದ್ಧ ನರ್ತಕಿ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, “ನಿಮ್ಮ ‘ದಿ ಡೆವಿಲ್’ ಕುರ್ಚಿಯನ್ನು ಈಗ ನರ್ತಕಿ ಚಿತ್ರಮಂದಿರದಲ್ಲಿ ಇರಿಸಲಾಗಿದೆ. ನಿಮ್ಮ ಮೆಚ್ಚಿನ ‘ದಿ ಡೆವಿಲ್’ ಈಗ ಚಿತ್ರಮಂದಿರಗಳಲ್ಲಿ ಪ್ರದರ್ಶನದಲ್ಲಿದೆ. ಟಿಕೆಟ್ಗಳನ್ನು ಬುಕ್ ಮಾಡಿ” ಎಂದು ಆಹ್ವಾನ ನೀಡಿದೆ.
ಚಿತ್ರ ಬಿಡುಗಡೆಗೂ ಮುನ್ನ ಈ ಚೇರ್ ಅನ್ನು ಒರಾಯನ್ ಮಾಲ್ ಲೇಕ್ ಸೈಡ್ ಪ್ರದೇಶದಲ್ಲಿ ಪ್ರದರ್ಶಿಸಲಾಗಿದ್ದು, ಅಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಚೇರ್ ಜೊತೆಗೆ ಫೋಟೋ ಮತ್ತು ವಿಡಿಯೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಈ ಚೇರ್ ಕುರಿತು ಚಿತ್ರದ ಆರ್ಟ್ ಡೈರೆಕ್ಟರ್ ಮೋಹನ್ ಬಿ. ಕೆರೆ ಅವರು ಈವಿಟಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚೇರ್ ಅನ್ನು ಸುಮಾರು 3 ಲಕ್ಷ ರೂಪಾಯಿಯಲ್ಲಿ ತಯಾರಿಸುವ ಯೋಜನೆ ಇತ್ತು. ಆದರೆ ಸಂಪೂರ್ಣವಾಗಿ ಸಿದ್ಧಗೊಳ್ಳಲು ಸುಮಾರು 50 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಈ ವಿಶೇಷ ಚೇರ್ ಅಭಿಮಾನಿಗಳಿಗಾಗಿ ನರ್ತಕಿ ಚಿತ್ರಮಂದಿರದಲ್ಲಿ ಇರಿಸಲಾಗಿದೆ.
ಪ್ರಕಾಶ್ ವೀರ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ದರ್ಶನ್ ಜೊತೆಗೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಗಿಲ್ಲಿ ನಟ, ಮಹೇಶ್ ಮಂಜ್ರೇಕರ್, ಶೋಭರಾಜ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ಎಸ್. ರಾಜ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ರಾಮ್–ಲಕ್ಷ್ಮಣ್ ಸಾಹಸ ನಿರ್ದೇಶನ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರದ ತಾಂತ್ರಿಕ ಶಕ್ತಿ ಆಗಿದೆ. ಸದ್ಯ ‘ದಿ ಡೆವಿಲ್’ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




