ಪ್ರಪಂಚದ ಪ್ರಮುಖ ಸುದ್ದಿಗಳು | International Express | 18-12-25

1) ಭಾರತೀಯರಿಗೆ ಅಮೆರಿಕದ ಸ್ಪಷ್ಟ ಸಂದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸಿಗರ ಮೇಲಿನ ಕಠಿಣ ಕ್ರಮದ ಮಧ್ಯೆ ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯು ವಿದೇಶಿಗರು ಅಮೆರಿಕದಲ್ಲಿ ಎಷ್ಟು ದಿನಗಳು ಉಳಿಯಬಹುದು? ಎಂಬುದಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಈ ಬಗ್ಗೆ ಮಾಡಿರುವ ಎಕ್ಸ್​ ಪೋಸ್ಟ್‌ನಲ್ಲಿ ರಾಯಭಾರ ಕಚೇರಿಯು ಅಮೆರಿಕದಲ್ಲಿ ವಿಸಿಟರ್​​ಗಳ ವಾಸ್ತವ್ಯದ ಅವಧಿಯು ಅವರ ವೀಸಾ ಮುಕ್ತಾಯ ದಿನಾಂಕದ ಪ್ರಕಾರವಾಗಿರುವುದಿಲ್ಲ ಎಂದು ಹೇಳಿದೆ.

“ಅಂತಾರಾಷ್ಟ್ರೀಯ ವಿಸಿಟರ್​​ಗಳಿಗೆ ಅಮೆರಿಕದಲ್ಲಿ ಉಳಿಯಲು ಅನುಮತಿಸಲಾದ ಸಮಯವನ್ನು ಅವರ ಆಗಮನದ ನಂತರ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಅಧಿಕಾರಿ ನಿರ್ಧರಿಸುತ್ತಾರೆ. ವೀಸಾ ಮುಕ್ತಾಯದ ದಿನಾಂಕಕ್ಕೂ ಅವರು ಅಮೆರಿಕದಲ್ಲಿ ಉಳಿಯಲು ಇರುವ ಗಡುವಿಗೂ ಸಂಬಂಧವಿಲ್ಲ. ವೀಸಾ ಮುಕ್ತಾಯದ ದಿನಾಂಕಕ್ಕೂ ಮೊದಲೇ ಅವರು ಅಮೆರಿಕ ಬಿಟ್ಟು ಹೊರಡಬೇಕಾಗಬಹುದು. ನೀವು ಎಷ್ಟು ಕಾಲ ಉಳಿಯಬಹುದು ಎಂಬುದನ್ನು ನೋಡಲು, https://i94.cbp.dhs.gov ನಲ್ಲಿ ನಿಮ್ಮ I-94 ‘Admit Until Date’ ಅನ್ನು ಪರಿಶೀಲಿಸಿ” ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಸಾಮಾನ್ಯವಾಗಿ ವಿಮಾನ ನಿಲ್ದಾಣ ಅಥವಾ ಬಂದರು ಮೂಲಕ ಅಮೆರಿಕಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕಸ್ಟಮ್ಸ್ ಮತ್ತು ಗಡಿ ಪೊಲೀಸ್ ಅಧಿಕಾರಿ ಎಲೆಕ್ಟ್ರಾನಿಕ್ I-94 ಫಾರ್ಮ್ ಅನ್ನು ಒದಗಿಸುತ್ತಾರೆ. ಈ ವ್ಯಕ್ತಿಗಳು ಇನ್ನು ಮುಂದೆ I-94 ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಅನ್ನು ಬಳಸಬೇಕಾಗಿಲ್ಲ. ಆದರೆ, ಭೂಮಿ ಅಥವಾ ಹಡಗಿನ ಮೂಲಕ ಅಮೆರಿಕವನ್ನು ಪ್ರವೇಶಿಸುವವರು ತಾತ್ಕಾಲಿಕ I-94 ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಅನ್ನು ಬಳಸಬೇಕಾಗುತ್ತದೆ. ಹೀಗಾಗಿ ಅದಾದ ನಂತರ ಪ್ರವೇಶದ ಹಂತದಲ್ಲಿ ಅವರು ಅಮೆರಿಕದಲ್ಲಿ ವಾಸವಾಗುವ ಗಡುವಿನ ಸಮಯವನ್ನು ನಿರ್ಧರಿಸಲಾಗುತ್ತದೆ.

====================================

2) ತೈವಾನ್‌ಗೆ ದೊಡ್ಡಣ್ಣ ಭಾರೀ ಶಸ್ತ್ರಾಸ್ತ್ರ ಮಾರಾಟ

ಅಮೆರಿಕವು ತೈವಾನ್‌ಗೆ $11.1 ಬಿಲಿಯನ್ ಶಸ್ತ್ರಾಸ್ತ್ರ ಮಾರಾಟವನ್ನು ಅನುಮೋದಿಸಿದೆ , ಇದು ವಾಷಿಂಗ್ಟನ್‌ನ ಸ್ವಯಂ ಆಡಳಿತದ ದ್ವೀಪಕ್ಕಾಗಿ ಇದುವರೆಗಿನ ಅತಿದೊಡ್ಡ ಶಸ್ತ್ರಾಸ್ತ್ರ ಪ್ಯಾಕೇಜ್‌ಗಳಲ್ಲಿ ಒಂದಾಗಿದೆ, ಬೀಜಿಂಗ್ ಇದನ್ನು ಚೀನಾದ ಮುಖ್ಯ ಭೂಭಾಗದೊಂದಿಗೆ ಏಕೀಕರಿಸುವುದಾಗಿ ಭರವಸೆ ನೀಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ದೂರದರ್ಶನದ ಭಾಷಣದ ಸಂದರ್ಭದಲ್ಲಿ ಬುಧವಾರ ತಡರಾತ್ರಿ ಅಮೆರಿಕದ ವಿದೇಶಾಂಗ ಇಲಾಖೆ ಈ ಒಪ್ಪಂದವನ್ನು ಘೋಷಿಸಿದೆ.

ಸ್ತಾವಿತ ಮಾರಾಟದಲ್ಲಿರುವ ಶಸ್ತ್ರಾಸ್ತ್ರಗಳಲ್ಲಿ 82 ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್ ಅಥವಾ HIMARS, ಮತ್ತು 420 ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಮ್ಸ್ ಅಥವಾ ATACMS – $4 ಬಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ – ಸೇರಿವೆ, ಇವು ರಷ್ಯಾದ ವೈಮಾನಿಕ ದಾಳಿಯ ವಿರುದ್ಧ ರಕ್ಷಿಸಲು ಯುಎಸ್ ಉಕ್ರೇನ್‌ಗೆ ಒದಗಿಸುತ್ತಿದ್ದ ರಕ್ಷಣಾ ವ್ಯವಸ್ಥೆಗಳಿಗೆ ಹೋಲುತ್ತವೆ.

ಈ ಒಪ್ಪಂದವು 4 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಮೌಲ್ಯದ 60 ಸ್ವಯಂ ಚಾಲಿತ ಹೊವಿಟ್ಜರ್ ಫಿರಂಗಿ ವ್ಯವಸ್ಥೆಗಳು ಮತ್ತು ಸಂಬಂಧಿತ ಉಪಕರಣಗಳು ಮತ್ತು 1 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಮೌಲ್ಯದ ಡ್ರೋನ್‌ಗಳನ್ನು ಸಹ ಒಳಗೊಂಡಿದೆ.

=================================

3) 56,000 ಭಿಕ್ಷಕರನ್ನ ಹೊರಹಾಕಿದ ಸೌದಿ ಅರೇಬಿಯಾ

ಸೌದಿ ರಾಷ್ಟ್ರಗಳಿಗೆ ವಲಸೆ ಹೋಗುತ್ತಿರುವ ಪಾಕಿಸ್ತಾನೀಯರಲ್ಲಿ ಕೆಲವರು ಅಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿರುವುದು ಪತ್ತೆಯಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪಾಕಿಸ್ತಾನ ಮೂಲದ ಭಿಕ್ಷುಕರು ಹೆಚ್ಚಾಗುತ್ತಿರುವುದು ಪಾಕಿಸ್ತಾನದ ಇಮೇಜ್‌ಗೆ ಧಕ್ಕೆ ತರುತ್ತಿದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಅಜರ್‌ಬೈಜಾನ್ ಮತ್ತು ಬಹ್ರೇನ್‌ನಂತಹ ದೇಶಗಳು ಸಾವಿರಾರು ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಿವೆ. ಸೌದಿ ಅರೇಬಿಯಾ ಒಂದೇ ಸುಮಾರು 56,000 ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಿದೆ ಎಂದು ‘ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಗಡಿ ಭದ್ರತಾ ಏಜೆನ್ಸಿಯ ಮುಖ್ಯಸ್ಥರಾದ ರಿಫತ್ ಮುಖ್ತಾರ್, “ಸೌದಿ ಅರೇಬಿಯಾದಿಂದ ಸುಮಾರು 56,000 ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಲಾಗಿದೆ” ಎಂದು ತಿಳಿಸಿದ್ದಾರೆಂದು ‘ದಿ ನ್ಯೂಸ್ ಇಂಟರ್‌ನ್ಯಾಷನಲ್’ ವರದಿಯಲ್ಲಿ ಪ್ರಕಟವಾಗಿದೆ. ಇದೇ ವೇಳೆ, 2025ರಲ್ಲಿ 66,154 ಪ್ರಯಾಣಿಕರನ್ನು ಭಿಕ್ಷಟನೆಯ ಉದ್ದೇಶಕ್ಕಾಗಿ ವಿದೇಶಗಳಿಗೆ ತೆರಳುವವರನ್ನು ಪತ್ತೆ ಹಚ್ಚಿ ತಡೆಯಲಾಗಿದೆ.

ಸಂಘಟಿತ ಭಿಕ್ಷಾಟನಾ ಜಾಲಗಳು ಮತ್ತು ಅಕ್ರಮ ವಲಸಿಗರು ವಿದೇಶಗಳಿಗೆ ಪ್ರಯಾಣಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕರಾಚಿ ಮೂಲದ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ. ಈ ಅಂಕಿಅಂಶಗಳು ಪಾಕಿಸ್ತಾನದ ಸಂಸದೀಯ ಸಮಿತಿಯಿಂದ ಹೊರಬಿದ್ದಿವೆ. ಪಾಕಿಸ್ತಾನ ಸರ್ಕಾರವು ಸಾವಿರಾರು ನಾಗರಿಕರನ್ನು ‘ಎಕ್ಸಿಟ್ ಕಂಟ್ರೋಲ್ ಲಿಸ್ಟ್’ ಅಂದರೆ ನೋ-ಫ್ಲೈ ಪಟ್ಟಿಯಲ್ಲಿ ಸೇರಿಸಿದ ನಂತರವೂ ಈ ಸಮಸ್ಯೆ ಮುಂದುವರಿದಿದೆ.

ಈ ವೃತ್ತಿಪರ ಭಿಕ್ಷುಕರು ಪಾಕಿಸ್ತಾನದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಎಫ್ಐಎ ಮುಖ್ಯಸ್ಥ ಮುಖ್ತಾರ್ ಅವರ ಪ್ರಕಾರ, ಅಕ್ರಮ ವಲಸೆ ಮತ್ತು ಭಿಕ್ಷಾಟನಾ ಜಾಲಗಳು ಪಾಕಿಸ್ತಾನದ ಜಾಗತಿಕ ಚಿತ್ರಣವನ್ನು ಗಂಭೀರವಾಗಿ ಹಾನಿ ಮಾಡುತ್ತಿವೆ. ವರ್ಷಗಳಿಂದ, ಪಾಕಿಸ್ತಾನಿ ಭಿಕ್ಷುಕರು ಪಶ್ಚಿಮ ಏಷ್ಯಾದ ನಗರಗಳಲ್ಲಿ ಹೆಚ್ಚಾಗುತ್ತಿದ್ದಾರೆ ಅಂತ ಹೇಳಿದ್ದಾರೆ.

==============================

4) ಮಲ್ಯ ಹುಟ್ಟುಹಬ್ಬಕ್ಕೆ ಪಾರ್ಟಿ ಕೊಟ್ಟ ಮೋದಿ

ಇಂಡಿಯನ್ ಪ್ರೀಮಿಯರ್ ಲೀಗ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಹುಟ್ಟುಹಬ್ಬದ ಆಚರಣೆಯನ್ನು ಲಂಡನ್‌ನಲ್ಲಿ ಆಯೋಜಿಸಿದ್ದು, ಅವರ ಬೆಲ್‌ಗ್ರೇವ್ ಸ್ಕ್ವೇರ್ ನಿವಾಸಕ್ಕೆ ಹಲವಾರು ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿದ್ದರು. ಅತಿಥಿಗಳ ಪಟ್ಟಿಯಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ, ನಟ ಇದ್ರಿಸ್ ಎಲ್ಬಾ ಮತ್ತು ಫ್ಯಾಷನ್ ಡಿಸೈನರ್ ಮನೋವಿರಾಜ್ ಖೋಸ್ಲಾ ಕೂಡ ಇದ್ದರು.

ನಿನ್ನೆ ಸಂಜೆಯ ಫೋಟೋಗಳಲ್ಲಿ ಕಿರಣ್ ಮಜುಮ್ದಾರ್ ಶಾ ಅವರು ಖೋಸ್ಲಾ ಅವರೊಂದಿಗೆ ಪೋಸ್ ನೀಡುತ್ತಿರುವುದನ್ನು ಮತ್ತು ಇನ್ನೊಂದರಲ್ಲಿ ಎಲ್ಬಾ ಅವರೊಂದಿಗೆ ಚಾಟ್ ಮಾಡುತ್ತಿರುವುದನ್ನು ನೋಡಬಹುದು. ಫೋಟೋಗ್ರಾಫರ್ ಜಿಮ್ ರೈಡೆಲ್ ಎಕ್ಸ್‌ನಲ್ಲಿ ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಲಂಡನ್‌ನಲ್ಲಿ ವಿಜಯ್ ಮಲ್ಯ ಅವರ 70ನೇ ಪ್ರಿ-ಬರ್ತಡೇ ಪಾರ್ಟಿ ಏರ್ಪಡಿಸಿದ್ದಕ್ಕಾಗಿ ಲಲಿತ್ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.

ಲಲಿತ್ ಮೋದಿ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನನ್ನ ಮನೆಯಲ್ಲಿ ನನ್ನ ಸ್ನೇಹಿತ ವಿಜಯ್ ಮಲ್ಯ ಅವರ ಹುಟ್ಟುಹಬ್ಬಕ್ಕೂ ಮುನ್ನ ನಡೆದ ಪಾರ್ಟಿಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಹಲವು ವರ್ಷಗಳ ಕಾಲ ಭಾರತೀಯ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರೂ ಸಹ ಸಂತೋಷದ ಸಮಯವನ್ನು ಎಂಜಾಯ್ ಮಾಡುತ್ತಿರುವುದಕ್ಕಾಗಿ ಟ್ರೋಲ್ ಮಾಡಿದ್ದಾರೆ.

==========================

5) 54 ವರ್ಷಗಳ ಕಾಲ ಪತಿಗಾಗಿ ಕಾದ ಪತ್ನಿ

ಪ್ರೀತಿ ಎಂದರೆ ಕೇವಲ ಒಟ್ಟಿಗೆ ಇರುವುದಲ್ಲ. ದೂರವಿದ್ದರೂ ಒಬ್ಬರಿಗಾಗಿ ಒಬ್ಬರು ಕಾಯುವುದು ಎನ್ನುತ್ತಾರೆ. ಆದರೆ ಈ ಪ್ರೇಮ ಕಥೆಯಲ್ಲಿ ಮಹಿಳೆಯೊಬ್ಬರ ತ್ಯಾಗ ಮತ್ತು ಕಾಯುವಿಕೆ ಎಲ್ಲರ ಕಣ್ಣನ್ನು ತೇವಗೊಳಿಸುವಂತಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಬೇರ್ಪಟ್ಟ ದಂಪತಿಗಳು ಬರೋಬ್ಬರಿ 54 ವರ್ಷಗಳ ನಂತರ ಮತ್ತೆ ಭೇಟಿಯಾದಾಗ ನಡೆದ ಭಾವನಾತ್ಮಕ ಕ್ಷಣಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡನೇ ಮಹಾಯುದ್ಧದ ವೇಳೆ ಈ ದಂಪತಿಗಳು ಅನಿವಾರ್ಯ ಕಾರಣಗಳಿಂದ ಒಬ್ಬರಿಂದ ಒಬ್ಬರು ದೂರವಾಗಿದ್ದರು. ಯುದ್ಧ ಮುಗಿದ ನಂತರ ತನ್ನ ಪತಿ ಹಿಂತಿರುಗಿ ಬರುತ್ತಾರೆಂಬ ನಂಬಿಕೆಯಿಂದ ಈ ಮಹಿಳೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಾದಿದ್ದರು. ಪತಿಯ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಅವರು ಮತ್ತೊಂದು ಮದುವೆಯನ್ನೂ ಮಾಡಿಕೊಳ್ಳದ ಒಂಟಿಯಾಗಿ ಜೀವನ ಕಳೆದಿದ್ದರು. ಆದರೆ ಇತ್ತ ಪತಿ ಯುದ್ಧದ ನಂತರ ಪರಿಸ್ಥಿತಿಗೆ ತಕ್ಕಂತೆ ನಡೆದುಕೊಂಡು, ಮತ್ತೊಂದು ಮದುವೆಯಾಗಿ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸಂಸಾರ ಹೂಡಿದ್ದರು.

54 ವರ್ಷಗಳ ನಂತರದ ಭೇಟಿ ಸುಮಾರು 54 ವರ್ಷಗಳ ನಂತರ ಇಬ್ಬರೂ ಮುಖಾಮುಖಿಯಾದಾಗ ಆ ಮಹಿಳೆಗೆ ತನ್ನ ಪತಿಯ ಸಂಸಾರದ ಬಗ್ಗೆ ತಿಳಿಯಿತು. ವೈರಲ್ ವಿಡಿಯೋದಲ್ಲಿ ಆ ಮಹಿಳೆ ಪತಿಯನ್ನು ನೋಡಿ ಭಾವುಕರಾಗುವುದು, ಪ್ರೀತಿಯಿಂದ ಕೆನ್ನೆಯನ್ನು ಹಿಂಡುವುದು ಮತ್ತು ಯಾಕೆ ಮತ್ತೊಂದು ಮದುವೆಯಾದೆ ಎಂದು ಪ್ರೀತಿಯಿಂದಲೇ ಗದರಿಸುತ್ತಾ ಅಪ್ಪಿಕೊಳ್ಳುವ ದೃಶ್ಯ ಎಲ್ಲರ ಎದೆಯನ್ನು ಕರಗಿಸುವಂತಿದೆ. ಆಕೆಯ ಕಣ್ಣೀರಿನಲ್ಲಿ ವಿರಹದ ನೋವು ಹಾಗೂ ಪತಿಯನ್ನು ಕಂಡ ಸಂತೋಷ ಎರಡೂ ಎದ್ದು ಕಾಣುತ್ತಿತ್ತು.

About The Author