ದೇಶದ ಇಂದಿನ ಪ್ರಮುಖ ಸುದ್ದಿಗಳು – 18/12/2025

1) ಲೋಕಸಭೆಯಲ್ಲಿ ‘G Ram G’ ಮಸೂದೆ ಅಂಗೀಕಾರ

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇಂದು ಲೋಕಸಭೆಯಲ್ಲಿ ವಿಬಿ ಜಿ ರಾಮ್ ಜಿ ಮಸೂದೆಯನ್ನು ಅಂಗೀಕರಿಸಲಾಯಿತು.ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದ ಬಡವರ ಜೀವನಾಡಿಯಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ ಬದಲಾಗಿದೆ. ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ ಅಂದರೆ VB-G RAM G ಮಸೂದೆ-2025ಯನ್ನು ಅಂಗೀಕರಿಸಲಾಗಿದೆ. ವಿರೋಧ ಪಕ್ಷದ ಸಂಸದರು ಭಾರಿ ಗದ್ದಲ ಎಬ್ಬಿಸಿದರು. ಸರ್ಕಾರವು ಮಹಾತ್ಮ ಗಾಂಧಿಯವರನ್ನು ಅವಮಾನಿಸಿದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. 2009 ರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾತ್ಮಾ ಗಾಂಧಿಯವರ ಹೆಸರನ್ನು NREGA ಯೋಜನೆಗೆ ಸೇರಿಸಲಾಗಿತ್ತು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಕ್ರಮವನ್ನು ಸಮರ್ಥಿಸಿಕೊಂಡರು. ಗ್ರಾಮೀಣ ಉದ್ಯೋಗ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಕ್ಕಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಯಲ್ಲಿ ಗದ್ದಲ ಎಬ್ಬಿಸಿದರು, ಮಸೂದೆಯ ಪ್ರತಿಗಳನ್ನು ಹರಿದು ಸ್ಪೀಕರ್ ಕುರ್ಚಿಯ ಕಡೆಗೆ ಎಸೆದರು.

—————————-

2) ರಾಗಾ ಆಪ್ತನ ಪತ್ನಿ ಕಾಂಗ್ರೆಸ್ ಸ್ಥಾನಕ್ಕೆ ರಾಜೀನಾಮೆ

ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಎಂಎಲ್‌ಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2030 ರಲ್ಲಿ ಅವರ ಅವಧಿ ಕೊನೆಗೊಳ್ಳಬೇಕಿತ್ತು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಪ್ರಜ್ಞಾ ಸತವ್ ಅವರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ. ಪ್ರಜ್ಞಾ ಸತವ್ ಅವರು ಇಂದು ಬೆಳಗ್ಗೆ ವಿಧಾನ ಪರಿಷತ್ ಸಭಾಧ್ಯಕ್ಷ ರಾಮ್ ಶಿಂಧೆ ಅವರೊಂದಿಗೆ ಮಾತನಾಡಿದ ನಂತರ ಪರಿಷತ್ ಸಚಿವಾಲಯಕ್ಕೆ ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಚುನಾವಣೆಗಳ ಮಧ್ಯೆ ಅವರ ಪ್ರಜ್ಞಾ ಸತವ್ ಅವರ ರಾಜೀನಾಮೆ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ.

—————————-

3) ಬಿಜೆಪಿ–ಕಾಂಗ್ರೆಸ್ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ದೆಹಲಿಯಲ್ಲಿ ತೀವ್ರಗೊಳ್ಳುತ್ತಿರುವ ವಾಯು ಮಾಲಿನ್ಯ ಸಮಸ್ಯೆ ರಾಜಕೀಯ ವಾಗ್ದಾಳಿಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ ನಡೆಸಿದ್ದು, ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಮಾಲಿನ್ಯ ನಿಯಂತ್ರಣದಲ್ಲಿ ವಿಫಲವಾಗಿವೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದರೆ, ರಾಷ್ಟ್ರ ರಾಜಧಾನಿ ಮಾಲಿನ್ಯದಿಂದ ನರಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಪರಾಲಿ ದಹನ ನಡೆಯುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿ, ದೆಹಲಿಯ ಮಾಲಿನ್ಯಕ್ಕೆ ಕಾರಣಗಳು ದೆಹಲಿಯಲ್ಲಿಯೇ ಇವೆ ಎಂದು ಹೇಳಿದ್ದಾರೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್‌ನಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸದೇ, ಅಧಿಕೃತ ಎಕ್ಯೂಐ ಅಂಕಿಅಂಶಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ದೆಹಲಿ “ಗ್ಯಾಸ್ ಚೇಂಬರ್” ಆಗುತ್ತಿರುವಾಗ ಕೇಂದ್ರ ಸರ್ಕಾರ ಮೌನವಾಗಿದೆ ಎಂದ ಅವರು, ಬಿಜೆಪಿ ಸಚಿವರೊಂದಿಗೆ ಸಾರ್ವಜನಿಕ ಚರ್ಚೆಗೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ.

—————————-

4) ಒಮಾನ್ ಗೆ ಬಂದಿಳಿದ ಮೋದಿಗೆ ಭವ್ಯ ಸ್ವಾಗತ

ಇಥಿಯೋಪಿಯಾ ಪ್ರವಾಸವನ್ನು ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಸಂಜೆ ಎರಡು ದಿನಗಳ ಭೇಟಿಗಾಗಿ ಒಮಾನ್‌ ರಾಜಧಾನಿ ಮಸ್ಕತ್ ಗೆ ಬಂದಿಳಿದರು. ಮಸ್ಕತ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಒಮಾನ್‌ನ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ​​ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಆತ್ಮೀಯವಾಗಿ ಬರಮಾಡಿಕೊಂಡರು. ಭಾರತ-ಒಮಾನ್ ಸ್ನೇಹದ ಬಗ್ಗೆ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನಾವು ಉತ್ತಮ ಸಂವಾದವನ್ನು ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಒಮಾನ್‌ಗೆ ಭೇಟಿ ನೀಡುತ್ತಿದ್ದಾರೆ. ಇದು ಗಲ್ಫ್ ರಾಷ್ಟ್ರಕ್ಕೆ ಅವರ ಎರಡನೇ ಭೇಟಿಯಾಗಿದ್ದು, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳನ್ನು ಸೂಚಿಸುತ್ತದೆ.

—————————-

5) ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳು

2026 ರ ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನದ ಮುಖ್ಯ ಅತಿಥಿಯಾಗಿ ಯುರೋಪಿಯನ್ ಒಕ್ಕೂಟದ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಅವರು ಭಾಗವಹಿಸಲಿದ್ದಾರೆ. ಮುಂಬರುವ ಜನವರಿ 26 ರಂದು ನಡೆಯಲಿರುವ 77 ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಆಗಮಿಸಲಿದ್ದಾರೆ. ಏತನ್ಮಧ್ಯೆ, ಯುರೋಪಿಯನ್ ನಾಯಕರ ಈ ಭೇಟಿ ವೇಳೆ, ಭಾರತ ಹಾಗೂ ಯುರೋಪಿಯನ್ ಒಕ್ಕೂಟ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದ್ದು, ಜನವರಿ 27 ರಂದು ನಡೆಯಲಿರುವ ಭಾರತ-EU ಶೃಂಗಸಭೆಯಲ್ಲಿ ಎರಡೂ ಕಡೆಯವರು ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

—————————-

6) ದೆಹಲಿ ಸ್ಫೋಟ – ಆರೋಪಿ NIA ಕಸ್ಟಡಿಗೆ

ದೆಹಲಿ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಮಹತ್ವದ ಬೆಳವಣಿಗೆಯನ್ನು ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ನಿವಾಸಿಯೊಬ್ಬರನ್ನು ಎನ್‌ಐಎ ಬಂಧಿಸಿದ್ದು, ಇದು ಈ ಪ್ರಕರಣದ ಒಂಬತ್ತನೇ ಬಂಧನವಾಗಿದೆ. ಬಂಧಿತ ವ್ಯಕ್ತಿ ಆತ್ಮಾಹುತಿ ಬಾಂಬರ್ ಉಮರ್–ಉನ್–ನಬಿಯ ನಿಕಟ ಸಹಚರ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಬಂಧಿತನನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಬಿಗಿ ಭದ್ರತೆಯ ನಡುವೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 26ರವರೆಗೆ ಎನ್‌ಐಎ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ. ಈ ವಿಚಾರಣೆಯನ್ನು ಮುಚ್ಚಿದ ಕೋಣೆಯಲ್ಲಿ ನಡೆಸಲಾಗಿದೆ. ನವೆಂಬರ್ 10ರಂದು ನಡೆದ ಈ ಭೀಕರ ಸ್ಫೋಟದಲ್ಲಿ 15 ಮಂದಿ ಸಾವನ್ನಪ್ಪಿದ್ದು, ಎರಡು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹುಂಡೈ ಐ20 ಕಾರಿನಲ್ಲಿ ಅಳವಡಿಸಿದ್ದ ಐಇಡಿ ಮೂಲಕ ದಾಳಿ ನಡೆಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 73 ಸಾಕ್ಷಿಗಳನ್ನು ವಿಚಾರಣೆ ನಡೆಸಿರುವ ಎನ್‌ಐಎ, ದೇಶವ್ಯಾಪಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ದಾಳಿಯ ಹಿಂದೆ ಇರುವ ಸಂಪೂರ್ಣ ಸಂಚು ಮತ್ತು ಸಂಪರ್ಕ ಜಾಲವನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರಿದಿವೆ.

—————————-

7) ಗಜೇಂದ್ರ ಹೇಳಿದ್ದೇನು? ಸೋನಿಯಾ ಕುರಿತು ಚರ್ಚೆ ಶುರು

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿವೆ ಎಂಬ ಚರ್ಚೆಗೆ ಕೇಂದ್ರ ಸರ್ಕಾರ ಅಂತ್ಯ ಹಾಡಿದೆ. ಪಂಡಿತ್ ನೆಹರು ಅವರ ದಾಖಲೆಗಳು ಕಾಣೆಯಾಗಿಲ್ಲ, ಆದರೆ ಅವು ಸೋನಿಯಾ ಗಾಂಧಿ ಬಳಿ ಇದೆ ಎಂದು ಸ್ಪಷ್ಟಪಡಿಸಿದೆ. ಈಗ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಚರ್ಚೆ ಸೃಷ್ಟಿಯಾಗಿದೆ, ಮತ್ತು ಸರ್ಕಾರ ಸೋನಿಯಾ ಗಾಂಧಿ ಅವರಿಗೆ ಈ ದಾಖಲೆಗಳನ್ನು ಹಿಂತಿರುಗಿಸಲು ಸೂಚಿಸಿದೆ. ಕೆಲವು ದಿನಗಳ ಹಿಂದೆ, ಪ್ರಧಾನಿಯವರ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಿಂದ ಪಂಡಿತ್ ನೆಹರು ಅವರ ಪ್ರಮುಖ ದಾಖಲೆಗಳು ಕಾಣೆಯಾಗಿವೆ ಎಂದು ಆರೋಪಿಸಲಾಗಿತ್ತು. ಸಂಸತ್ತಿನಲ್ಲಿ ಬಿಜೆಪಿ ಸಂಸದ ಸಂಬಿತ್ ಪಾತ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, 2025 ರ ವಾರ್ಷಿಕ ಲೆಕ್ಕಪರಿಶೋಧನೆಯಲ್ಲಿ ಒಂದೇ ಒಂದು ದಾಖಲೆಯೂ ಕಾಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನೀವು 2008ರಲ್ಲಿ ದಾಖಲೆಗಳನ್ನು ತೆಗೆದುಕೊಂಡಿದ್ದಾರಾ? ಸಂಸ್ಕೃತಿ ಸಚಿವಾಲಯವು ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಏಪ್ರಿಲ್ 29, 2008 ರಂದು, ಸೋನಿಯಾ ಗಾಂಧಿಯವರ ಪ್ರತಿನಿಧಿ ಎಂ.ವಿ. ರಾಜನ್ ಅವರು ನೆಹರು ಅವರಿಗೆ ಸಂಬಂಧಿಸಿದ ಖಾಸಗಿ ಕುಟುಂಬ ಪತ್ರಗಳು ಮತ್ತು ದಾಖಲೆಗಳನ್ನು ಹಿಂತಿರುಗಿಸುವಂತೆ ಕೋರಿ ಪತ್ರ ಬರೆದಿದ್ದರು. ವಿನಂತಿಯ ಬಳಿಕ, ಆಗಿನ ಸರ್ಕಾರವು ನೆಹರು ಅವರ ಖಾಸಗಿ ದಾಖಲೆಗಳ 51 ಪೆಟ್ಟಿಗೆಗಳನ್ನು ಸೋನಿಯಾ ಗಾಂಧಿಯವರಿಗೆ ಹಸ್ತಾಂತರಿಸಿತ್ತು. ಪಿಎಂಎಂಎಲ್ ಜನವರಿ 28, 2025 ಮತ್ತು ಜುಲೈ 3, 2025 ರಂದು ಸೋನಿಯಾ ಗಾಂಧಿಯವರ ಕಚೇರಿಗೆ ಈ ದಾಖಲೆಗಳನ್ನು ಹಿಂದಿರುಗಿಸುವಂತೆ ಸೂಚನೆ ನೀಡಿದೆ. ಆದರೆ ಅವುಗಳನ್ನು ಇನ್ನೂ ಹಿಂತಿರುಗಿಸಲಾಗಿಲ್ಲ.

—————————-

8) ಕಾಲ್ತುಳಿತ ಬಳಿಕ ಸಮಾವೇಶದಲ್ಲಿ ವಿಜಯ್ ವಾಗ್ದಾಳಿ

ಡಿಎಂಕೆ “ದುಷ್ಟ ಶಕ್ತಿ”, ತಮಿಳಗ ವೆಟ್ರಿ ಕಳಗಂ ಪಕ್ಷ “ಶುದ್ಧ ಮತ್ತು ನಿರ್ಮಲ ಶಕ್ತಿ” ಎಂದು ನಟ, ರಾಜಕಾರಣಿ ವಿಜಯ್ ಅವರು ಕರೂರು ದುರಂತದ ನಂತರ ತಮಿಳುನಾಡಿನಲ್ಲಿ ನಡೆಸಿದ ಮೊದಲ ಸಾರ್ವಜನಿಕ ಸಭೆಯಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಕೃಷಿ ಮತ್ತು ಸಂಸ್ಕೃತಿಯನ್ನು ಉಲ್ಲೇಖಿಸಿ ತಮ್ಮ ಭಾಷಣ ಆರಂಭಿಸಿದರು. ಈರೋಡು ಅರಿಶಿಣ ಉತ್ಪಾದನೆಗೆ ಹೆಸರುವಾಸಿ. ಒಳ್ಳೆಯ ಕಾರ್ಯ ಆರಂಭಿಸುವಾಗ ಅರಿಶಿಣ ಬಳಸುವುದು ಸಂಪ್ರದಾಯ ಎಂದು ಸಂಕೇತಿಸಿದರು. ಸುಮಾರು 34 ವರ್ಷಗಳಿಂದ ಸಿನಿಮಾ ಮೂಲಕ ಜನರೊಂದಿಗೆ ಸಂಪರ್ಕ ಹೊಂದಿರುವುದನ್ನು ನೆನಪಿಸಿಕೊಂಡ ವಿಜಯ್, ನಾನು ಎಲ್ಲವನ್ನೂ ಬಿಟ್ಟು ಬಂದಿದ್ದೇನೆ, ಜನರು ನನ್ನನ್ನು ಬಿಟ್ಟುಕೊಡುವುದಿಲ್ಲ. ನೀವು ತೋರಿದ ಬೆಂಬಲಕ್ಕೆ ಕೃತಜ್ಞತೆ ತಿಳಿಸಿದರು. ಸಾಮಾಜಿಕ ಸುಧಾರಕ ಪೆರಿಯಾರ್ ಅವರು ಈರೋಡಿನ ಕಬ್ಬಿಣದ ಮನುಷ್ಯ. ಪೆರಿಯಾರ್ ತತ್ವಶಾಸ್ತ್ರೀಯ ಆಧಾರ ನೀಡಿದರೆ, ಅಣ್ಣಾ ಮತ್ತು ಎಂ.ಜಿ.ಆರ್ ಚುನಾವಣಾ ತಂತ್ರಗಳನ್ನು ನೀಡಿದರು. ಪೆರಿಯಾರ್ ಹೆಸರಿನಲ್ಲಿ ಲೂಟಿ ಮಾಡಬೇಡಿ. ಈ ರೀತಿಯ ಕೃತ್ಯಗಳನ್ನು ಟಿವಿಕೆಯ ರಾಜಕೀಯ ಹಾಗೂ ತಾತ್ವಿಕ ಶತ್ರುಗಳು ಮಾಡುತ್ತಾರೆ. ಡಿಎಂಕೆ ಸರ್ಕಾರ ಆಡಳಿತದಲ್ಲಿ ವಿಫಲಗೊಂಡಿದೆ. ನೀಟ್ ನಿಷೇಧ, ಶಿಕ್ಷಣ ಸಾಲ ಮನ್ನಾ ಮುಂತಾದ ಘೋಷಣೆಗಳು ಸುಳ್ಳು. ಅದಕ್ಕಾಗಿ ಡಿಎಂಕೆ ಹಾಗೂ ಸಮಸ್ಯೆಗಳು ಫೆವಿಕಾಲ್ ಹಾಕಿ ಒಂದಕ್ಕೊಂದು ಅಂಟಿಕೊಂಡಿವೆ ಎಂದು ವ್ಯಂಗ್ಯವಾಡಿದರು.

—————————-

9) 2026ರ ಅಂತ್ಯಕ್ಕೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್‌

2026 ರ ಅಂತ್ಯದ ವೇಳೆಗೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಘೋಷಣೆ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಹೊಸ ತಂತ್ರಜ್ಞಾನವು ಉಪಗ್ರಹ ಮತ್ತು AI ಆಧಾರಿತವಾಗಿದ್ದು ಪ್ರಯಾಣಿಕರು ಟೋಲ್ ಪ್ಲಾಜಾಗಳಲ್ಲಿ ಕಾಯುವ ಅಗತ್ಯವಿಲ್ಲ ಎಂದು ಹೇಳಿದರು. ಮೊದಲು ಟೋಲ್‌ನಲ್ಲಿ ಹಣ ಪಾವತಿಸಬೇಕಿತ್ತು. ಈ ಪ್ರಕ್ರಿಯೆ ಮುಗಿಸಿಕೊಳ್ಳಲು 3-10 ನಿಮಿಷವಾಗುತ್ತಿತ್ತು. ಫಾಸ್ಟ್‌ ಟ್ಯಾಗ್‌ ಬಂದ ನಂತರ 60 ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಟೋಲ್‌ ಪ್ರಕ್ರಿಯೆ ಮುಕ್ತಾಯವಾಗುತ್ತಿದೆ. ಇದರಿಂದ ನಮ್ಮ ಆದಾಯ ಕನಿಷ್ಠ 5 ಸಾವಿರ ಕೋಟಿ ರೂ. ಏರಿಕೆಯಾಗಿದೆ ಎಂದು ವಿವರಿಸಿದರು. ದೇಶಾದ್ಯಂತ ಬಹು ಪಥ ಮುಕ್ತ ಹರಿವು ಜಾರಿಯಾದರೆ ಕಾರುಗಳು ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಟೋಲ್ ದಾಟಬಹುದು. 2026 ರ ಅಂತ್ಯದ ವೇಳೆಗೆ ನಾವು ಈ ಕೆಲಸವನ್ನು ಪೂರ್ಣಗೊಳಿಸುತ್ತೇವೆ. ಇದಿರಂದಾಗಿ ಸುಮಾರು 1,500 ಕೋಟಿ ರೂ. ಮೌಲ್ಯದ ಇಂಧನ ಉಳಿತಾಯವಾಗಲಿದೆ. ನಮ್ಮ ಆದಾಯವು ಇನ್ನೂ 6,000 ಕೋಟಿ ರೂ.ಗಳಷ್ಟು ಹೆಚ್ಚಾಗುತ್ತದೆ ಮತ್ತು ಟೋಲ್ ಕಳ್ಳತನ ಕೊನೆಗೊಳ್ಳುತ್ತದೆ ಎಂದು ತಿಳಿಸಿದರು.

—————————-

10) ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಿ

ಹಿಂದೂ ಧರ್ಮ ಶ್ರೇಷ್ಠವಾದದ್ದು. ಭಾರತ ನೆಲದಲ್ಲಿರುವ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ನದಿಗಳನ್ನು ಪೂಜಿಸಬೇಕು ಎಂದು ಹಿರಿಯ RSS ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಏನೂ ತೊಂದರೆಯಾಗುವುದಿಲ್ಲ. ನಮ್ಮ ಮುಸ್ಲಿಂ ಸಹೋದರರು ಸಹ ಸೂರ್ಯ ನಮಸ್ಕಾರ ಮಾಡಿದರೆ, ಅವರಿಗೆ ಏನೂ ಆಗಲ್ಲ. ಹಾಗಂತ ಅವರು ಮಸೀದಿಗೆ ಹೋಗುವುದನ್ನು ಯಾರೂ ತಡೆಯುವುದಿಲ್ಲ. ನಮ್ಮ ಹಿಂದೂ ಧರ್ಮ ಸರ್ವೋಚ್ಛ. ಅದು ಎಲ್ಲರ ಪರವಾಗಿದೆ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ. ಯೋಗಾಸನಗಳ ಅನುಕ್ರಮವಾದ ಸೂರ್ಯ ನಮಸ್ಕಾರವು ವೈಜ್ಞಾನಿಕ ಮತ್ತು ಆರೋಗ್ಯ ಆಧಾರಿತ ಅಭ್ಯಾಸ. ಇದರಿಂದ ಮುಸ್ಲಿಮರಿಗೆ ಏನು ಹಾನಿ? ಪ್ರಾರ್ಥನೆ ಮಾಡುವವರು ಪ್ರಾಣಾಯಾಮ ಮಾಡಿದರೆ ತಪ್ಪೇ? ಸೂರ್ಯ ನಮಸ್ಕಾರ ಮಾಡೋದಕ್ಕೆ ನಮಾಜ್‌ ಬಿಡಿ ಅಂತ ನಾವು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾನವ ಧರ್ಮಕ್ಕೆ ಆದ್ಯತೆ ನೀಡುವ ಮೂಲಕ ಯಾವುದೇ ನಂಬಿಕೆಯನ್ನು ಅನುಸರಿಸಲು ಜನರು ಸ್ವತಂತ್ರರು. ಹಿಂದೂ ತತ್ವಶಾಸ್ತ್ರವು ಎಲ್ಲಾ ಜೀವಿಗಳು ಮತ್ತು ಪ್ರಕೃತಿ ವಿಚಾರವಾಗಿ ಅಹಿಂಸೆಯನ್ನು ಬೋಧಿಸುತ್ತದೆ ಎಂದು ತಿಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author