ಸಿಎಂ ಬಣದ ”ರಣತಂತ್ರ”: ಸತೀಶ್ ಅಹಿಂದ ಟ್ರಂಪ್ ಕಾರ್ಡ್?

ಒಂದೇ ಒಂದು ದಿನದ ಅಂತರದಲ್ಲಿ ಎರಡು ಡಿನ್ನರ್ ಪಾರ್ಟಿಗಳು. ಒಂದೇ ಬಣದ ನಾಯಕರು. ಅಧಿವೇಶನ ಅಂತ್ಯದ ಹೊಸ್ತಿಲಲ್ಲಿ ರಾಜಕೀಯದ ಅಡುಗೆ ಗಟ್ಟಿ ಆಗ್ತಿದೆಯಾ? ಅನ್ನೋ ಪ್ರಶ್ನೆ ಮೂಡಿದೆ. ಹೌದು ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯಕ್ಕೆ ಒಂದು ದಿನ ಬಾಕಿ ಇರುವಾಗಲೇ, ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಡಿನ್ನರ್ ರಾಜಕೀಯ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬುಧವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಆಪ್ತ ನಾಯಕರಿಗೆ ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದ ಸತೀಶ್ ಜಾರಕಿಹೊಳಿ, ಅದರ ಮುಂದುವರಿದ ಭಾಗವಾಗಿ ಗುರುವಾರ ರಾತ್ರಿ ತಮ್ಮ ನಿವಾಸದಲ್ಲೇ ಮತ್ತೊಂದು ಮಹತ್ವದ ಔತಣಕೂಟವನ್ನು ಆಯೋಜಿಸಿದ್ದಾರೆ.

ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಈ ಡಿನ್ನರ್ ಪಾರ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ, ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್,
ಶಾಸಕ ಕೆ.ಎನ್. ರಾಜಣ್ಣ ಸೇರಿದಂತೆ ಒಟ್ಟು ಸುಮಾರು 15 ಮಂದಿ ಅಹಿಂದ ನಾಯಕರು, ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದರು. ಔತಣಕೂಟದಲ್ಲಿ ಮಟನ್, ಚಿಕನ್, ಮೀನು ಸೇರಿದಂತೆ 30ಕ್ಕೂ ಅಧಿಕ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಸ್ಯಾಹಾರ ಭೋಜನವನ್ನು ಮಾತ್ರ ಸ್ವೀಕರಿಸಿದರು. ಚಳಿಗಾಲದ ಅಧಿವೇಶನ ಮುಗಿದ ನಂತರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

ಈ ಬೆಳವಣಿಗೆಯ ನಡುವೆಯೇ ನಡೆದಿರುವ ಸತೀಶ್ ಜಾರಕಿಹೊಳಿ ಅವರ ಡಿನ್ನರ್ ಪಾರ್ಟಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಹಿಂದ ನಾಯಕತ್ವ ಬದಲಾವಣೆ ಮಾಡಬಾರದು ಎಂಬ ಸಂದೇಶವನ್ನು ಪರೋಕ್ಷವಾಗಿ ಹೈಕಮಾಂಡ್‌ಗೆ ರವಾನಿಸುವ ಉದ್ದೇಶದಿಂದಲೇ ಈ ಸಭೆ ನಡೆಸಲಾಗಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ದೆಹಲಿಗೆ ತೆರಳುವ ಮುನ್ನವೇ ಅಹಿಂದ ಟ್ರಂಪ್ ಕಾರ್ಡ್ ಬಳಸಿ ಒತ್ತಡ ತಂತ್ರ ರೂಪಿಸುವ ಯತ್ನ ಇದಾಗಿದ್ದು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬಾರದು ಎಂಬ ನಿಲುವಿನ ಬಗ್ಗೆ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸುವ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ಅಧಿವೇಶನ ಅಂತ್ಯದ ಹೊಸ್ತಿಲಲ್ಲಿ ನಡೆದ ಈ ಡಿನ್ನರ್ ರಾಜಕೀಯ, ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ತಿರುವಿಗೆ ಕಾರಣವಾಗುವ ಸಾಧ್ಯತೆಯನ್ನು ಹುಟ್ಟುಹಾಕಿದೆ.

ವರದಿ : ಲಾವಣ್ಯ ಅನಿಗೋಳ

About The Author