ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆಯ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗವು ಒಂದೂವರೆ ತಿಂಗಳು ವಿಸ್ತರಿಸಿದೆ. ರಾಜ್ಯ ಚುನಾವಣಾ ಆಯೋಗವು 2025ರ ಅಕ್ಟೋಬರ್ 27ರಂದು ಪ್ರಕಟಿಸಿದ್ದ ವೇಳಾಪಟ್ಟಿಯ ಪ್ರಕಾರ, 2026ರ ಜನವರಿ 29ರಂದು ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು.
ಆದರೆ ಪ್ರಕ್ರಿಯೆಗಳು ಮುಂದುವರಿದಿರುವ ನಡುವೆಯೇ ವೇಳಾಪಟ್ಟಿಯನ್ನು ಪರಿಷ್ಕರಿಸಿರುವ ಆಯೋಗ, ಇದೀಗ 2026ರ ಮಾರ್ಚ್ 16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಒಟ್ಟು 369 ವಾರ್ಡ್‌ಗಳ ಮತದಾರರ ಪಟ್ಟಿ ಹಿಂದಿನ ವೇಳಾಪಟ್ಟಿಯಂತೆ ಅಂತಿಮಗೊಂಡಿದ್ದರೆ, ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇತ್ತು.
ಆದರೆ ಈಗ ವೇಳಾಪಟ್ಟಿಗೆ ಒಂದೂವರೆ ತಿಂಗಳ ವಿಸ್ತರಣೆ ನೀಡಿರುವ ಹಿನ್ನೆಲೆಯಲ್ಲಿ, ಚುನಾವಣೆ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಯಾವುದೇ ಪ್ರಮುಖ ಪರೀಕ್ಷೆಗಳು ಅಥವಾ ಸಾರ್ವಜನಿಕ ಕಾರ್ಯಕ್ರಮಗಳು ಇದ್ದರೆ, ಚುನಾವಣೆ ಪ್ರಕ್ರಿಯೆ ಇನ್ನಷ್ಟು ಮುಂದೂಡಲ್ಪಡುವ ಸಾಧ್ಯತೆಯನ್ನೂ ನಿರಾಕರಿಸಲಾಗುವುದಿಲ್ಲ.
ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿ ಸಿದ್ಧಗೊಂಡ ಬಳಿಕ, ವಾರ್ಡ್‌ಗಳ ಅಂತಿಮೀಕರಣ ಹಾಗೂ ಮೀಸಲಾತಿ ಘೋಷಣೆಯನ್ನು ಸರ್ಕಾರ ಕೈಗೊಂಡರೆ, ಅದರ ಸುಮಾರು ಒಂದು ವಾರದ ಒಳಗೆ ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಅಧಿಸೂಚನೆ ಹೊರಬಂದ ನಂತರ, 45 ದಿನಗಳ ಒಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮುಗಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ




