‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ತಂದೆಗೆ ಕಿರುಕುಳ ನೀಡದಂತೆ ಕೋರ್ಟ್ ಆದೇಶ ನೀಡಿದೆ. ತಂದೆಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಬಾರದು ಮತ್ತು ಅವರು ತಮ್ಮ ಸ್ವಂತ ಮನೆಯಲ್ಲಿ ವಾಸಿಸುವುದಕ್ಕೆ ಅಡ್ಡಿಪಡಿಸಬಾರದು ಎಂದು ಕುಂದಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯವು ಚೈತ್ರಾ ಕುಂದಾಪುರ ಅವರಿಗೆ ನಿರ್ದೇಶನ ನೀಡಿದೆ.
71 ವರ್ಷದ ಬಾಲಕೃಷ್ಣ ನಾಯ್ಕ ಅವರು, ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ–2007ರ ಅಡಿಯಲ್ಲಿ ಪರಿಹಾರ ಕೋರಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿ, ದೂರು ಹಾಗೂ ಪ್ರತಿವಾದಗಳ ವಿಚಾರಣೆ ನಡೆಸಿದ ಕುಂದಾಪುರ ಸಹಾಯಕ ಆಯುಕ್ತ ರಶ್ಮಿ ಎಸ್.ಆರ್. ಅವರು ಈ ಆದೇಶ ಹೊರಡಿಸಿದ್ದಾರೆ.
ಇದಲ್ಲದೆ, ಬಾಲಕೃಷ್ಣ ನಾಯ್ಕ ಅವರ ಜೀವ ಹಾಗೂ ಸೊತ್ತಿನ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗೆ ನ್ಯಾಯಾಲಯ ಸೂಚನೆ ನೀಡಿದೆ. ದೂರಿನಲ್ಲಿ, ಪತ್ನಿ ಹಾಗೂ ಮಗಳು ಚೈತ್ರಾ ಸೇರಿಕೊಂಡು ಮನೆಯ ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದು, ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಬಾಲಕೃಷ್ಣ ನಾಯ್ಕ ಅವರು ಆರೋಪಿಸಿದ್ದಾರೆ.
ಈ ನಿರಂತರ ಕಿರುಕುಳದ ಕಾರಣದಿಂದಾಗಿ ಮಂಗಳೂರಿನ ಹೊಟೇಲ್ನಲ್ಲಿ ಕೆಲಸಕ್ಕೆ ಸೇರಿಕೊಂಡು ಅಲ್ಲಿಯೇ ವಾಸಿಸುತ್ತಿದ್ದು, ಹಿರಿಯ ಮಗಳನ್ನು ಭೇಟಿಯಾಗಲು ಮಾತ್ರ ಸಮಯಾವಕಾಶದಲ್ಲಿ ಊರಿಗೆ ಬರುತ್ತಿದ್ದೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಪ್ರಸ್ತುತ ಚೈತ್ರಾ ಹಾಗೂ ಅವರ ತಾಯಿ, ತಮ್ಮ ಸ್ವಂತ ಮನೆಗೆ ಪ್ರವೇಶಿಸಲು ಅವಕಾಶ ನೀಡದೇ ಅವಾಚ್ಯವಾಗಿ ವರ್ತಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಬಾಲಕೃಷ್ಣ ನಾಯ್ಕ ಅವರ ಪರವಾಗಿ ವಕೀಲ ಕೆ.ಸಿ. ಶೆಟ್ಟಿ ಅವರು ಕುಂದಾಪುರ ನ್ಯಾಯಮಂಡಳಿಯಲ್ಲಿ ವಾದ ಮಂಡಿಸಿದ್ದರು




