ಹೊಸ ವರ್ಷಕ್ಕೆ ನಗರಿ ಸಜ್ಜು – ಧರೆಗೆ ಈಶ್ವರನ ಹೂದೋಟ!

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದ ನಡುವೆ ಸಾಂಸ್ಕೃತಿಕ ನಗರಿ ಮೈಸೂರು ವಿಶೇಷವಾಗಿ ಮಿನುಗುತ್ತಿದೆ. 2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸಲು ಮೈಸೂರು ಅರಮನೆ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿದೆ. ಅರಮನೆ ಆವರಣದಲ್ಲಿ ನಡೆಯುತ್ತಿರುವ ಮಾಗಿ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದು, ಈಶ್ವರನ ಹೂದೋಟ ಧರೆಗೆ ಇಳಿದ ಅನುಭವವನ್ನು ನೀಡುತ್ತಿದೆ.

11 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಚಾಲನೆ ನೀಡಿದರು. ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಡಿಸೆಂಬರ್ 31ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಹೂವಿನ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಈ ವರ್ಷದ ಫ್ಲವರ್ ಶೋನ ಪ್ರಮುಖ ಆಕರ್ಷಣೆಯಾಗಿ ಶೃಂಗೇರಿಯ ಶಾರದಾ ಮಾತೆ ದೇಗುಲದ ಮಾದರಿ ನಿರ್ಮಿಸಲಾಗಿದೆ. 50 ಅಡಿ ಅಗಲ, 16 ಅಡಿ ಉದ್ದ ಹಾಗೂ 25 ಅಡಿ ಎತ್ತರ ಹೊಂದಿರುವ ಈ ಭವ್ಯ ಕಲಾಕೃತಿ ಲಕ್ಷಾಂತರ ಗುಲಾಬಿ ಮತ್ತು ಸೇವಂತಿಗೆ ಹೂಗಳಿಂದ ರೂಪುಗೊಂಡಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಫಲಪುಷ್ಪ ಪ್ರದರ್ಶನದಲ್ಲಿ 2025ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಗೆದ್ದ ಟ್ರೋಫಿಯ ಮಾದರಿ, ಸಾಲುಮರದ ತಿಮ್ಮಕ್ಕ, ಆಪರೇಷನ್ ಸಿಂಧೂರ್ ಹಾಗೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಲಾಕೃತಿಗಳು ವಿಶೇಷ ಆಕರ್ಷಣೆಯಾಗಿವೆ. ಜೊತೆಗೆ ಸೆಲ್ಫಿ ಪ್ರಿಯರಿಗಾಗಿ ವಿಶೇಷ ವಿನ್ಯಾಸದ ಸೆಲ್ಫಿ ಪಾಯಿಂಟ್‌ನ್ನೂ ನಿರ್ಮಿಸಲಾಗಿದೆ.

ಫ್ಲವರ್ ಶೋ ಜೊತೆಗೆ ಡಿಸೆಂಬರ್ 25ರವರೆಗೆ ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಮಣಿಕಾಂತ್ ಕದ್ರಿ, ವಾಸುಕಿ ವೈಭವ್ ಹಾಗೂ ಅಜಯ್ ವಾರಿಯರ್ ತಂಡಗಳ ಸಂಗೀತ ರಸಸಂಜೆ ಪ್ರೇಕ್ಷಕರ ಮನಸೂರೆಗೊಳ್ಳಲಿದೆ. ಸುಮಾರು 4 ಲಕ್ಷ ಹೂಗಳು ಮತ್ತು 35 ಸಾವಿರಕ್ಕೂ ಹೆಚ್ಚು ಜಾತಿಯ ಗಿಡಗಳಿಂದ ಮೈಸೂರು ಅರಮನೆ ಆವರಣ ಸೊಬಗಿನಿಂದ ಜಗಮಗಿಸುತ್ತಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author