ಟನಲ್ ರಸ್ತೆ ಟೆಂಡರ್‌ ವಿವಾದ, ಕಾಂಗ್ರೆಸ್ ಗೆ ಧರ್ಮ ಸಂಕಟ!

ಬೆಂಗಳೂರು ಟನಲ್ ರಸ್ತೆ ಯೋಜನೆ ಇದೀಗ ಕೇವಲ ಮೂಲಸೌಕರ್ಯ ವಿಚಾರವಾಗಿಲ್ಲ. ಇದು ರಾಜಕೀಯ ವಾದ–ವಿವಾದಕ್ಕೂ ಕಾರಣವಾಗಿದೆ. ಕಾರಣ, ಬೆಂಗಳೂರು ಟನಲ್ ರಸ್ತೆ ಟೆಂಡರ್‌ನಲ್ಲಿ ಅದಾನಿ ಗ್ರೂಪ್ ಅತಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿ ಮುಂಚೂಣಿಯಲ್ಲಿದೆ. ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ಸದಾ ಅದಾನಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್ ಪಕ್ಷ, ಈಗ ಅದೇ ಅದಾನಿ ಸಮೂಹಕ್ಕೆ ಟೆಂಡರ್ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು ಟನಲ್ ಮಾರ್ಗ ಯೋಜನೆಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) 17,698 ಕೋಟಿ ರೂ. ಅಂದಾಜು ವೆಚ್ಚ ನಿಗದಿಪಡಿಸಿತ್ತು. ಆದರೆ ಟೆಂಡರ್ ಸಲ್ಲಿಸಿದ ಕಂಪನಿಗಳ ಪೈಕಿ, ಅದಾನಿ ಗ್ರೂಪ್ 22,267 ಕೋಟಿ ರೂ.ಗೆ ಬಿಡ್ ಸಲ್ಲಿಸಿದ್ದು, ಇದು ಜಿಬಿಎ ಅಂದಾಜಿಗಿಂತ ಶೇ.24ರಷ್ಟು ಹೆಚ್ಚಾಗಿದೆ. ಆದರೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕಂಪನಿಗಳಲ್ಲಿ ಇದೇ ಅತಿ ಕಡಿಮೆ ಮೊತ್ತವಾಗಿರುವುದರಿಂದ, ನಿಯಮಾನುಸಾರ ಮೊದಲ ಆಯ್ಕೆಯಾಗಿ ಅದಾನಿ ಗ್ರೂಪ್ ಮುಂಚೂಣಿಯಲ್ಲಿದೆ.

ಅಂತಿಮ ಹಂತಕ್ಕೆ ಒಟ್ಟು ನಾಲ್ಕು ಕಂಪನಿಗಳು ಪೈಪೋಟಿ ನಡೆಸಿತ್ತು. ಈ ಪೈಕಿ ದಿಲೀಪ್ ಬಿಲ್ಡ್ ಕಾನ್ ಮತ್ತು ರೈಲ್ವೆ ವಿಕಾಸ‌ ನಿಗಮ ಲಿಮಿಟೆಡ್. ಆದ್ರೆ,ಕೆಲ ಕಂಪನಿಗಳು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲ್ಪಟ್ಟವು. ಕೊನೆಯದಾಗಿ ಅದಾನಿ ಗ್ರೂಪ್ ಹಾಗೂ ಹೈದರಾಬಾದ್ ಮೂಲದ ವಿಶ್ವಸಮುದ್ರ ಕಂಪೆನಿ ಅಖಾಡದಲ್ಲಿದೆ. ಹೈದರಾಬಾದಿನ ವಿಶ್ವ ಸಮುದ್ರ ಗ್ರೂಪ್ಸ್ 25,474 ಕೋಟಿ ರೂ.ಗೆ ಬಿಡ್ ಮಾಡಿದೆ.

ಸರ್ಕಾರದ ಅಂದಾಜಿಗಿಂತ 7776 ಕೋಟಿ ರೂ ಹೆಚ್ಚು ಮೊತ್ತಕ್ಕೆ ವಿಶ್ವಸಮುದ್ರ ಕಂಪನಿ ಬಿಡ್ ಮಾಡಿದೆ.‌ ಹೀಗಾಗಿ ಲೀಗಲಿ ಬಿಡ್ ಪಡೆಯಲು ಮೊದಲ ಆಯ್ಕೆ ಅದಾನಿ ಗ್ರೂಪ್ ಆಗಿರಲಿದೆ. ಆದರೆ ಅದಾನಿ ಗ್ರೂಪ್ ಗೆ ರಾಜ್ಯ ಸರ್ಕಾರ ಬಿಡ್ ಅಂತಿಮ ಮಾಡುತ್ತಾ ಎನ್ನುವುದೇ ಈಗಿರುವ ಯಕ್ಷ ಪ್ರಶ್ನೆ. ಈ ಬಗ್ಗೆ ಮಾತನಾಡಿದ DCM, ಯಾರೇ ಬಿಡ್ ಮಾಡಲಿ ಸರ್ಕಾರ ಏನು ಘೋಷಣೆ ಮಾಡಿದೆಯೋ ಅಷ್ಟೇ ಕೊಡೋದು.ಅದಾನಿ ಆಗಲಿ, ನಾನು ಆಗಲಿ, ನೀನು ಆಗಲಿ ಯಾರೇ ಹಾಕಿದ್ರು ಸರ್ಕಾರ ಹೇಳಿರೋ ಅಷ್ಟೇ ಮಾಡೋದು ಎಂದಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿ ಹಿಡಿದು ಅವರ ಪಕ್ಷದ ಕಾರ್ಯಕರ್ತರೂ ಸಹ ಅದಾನಿಯನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ. ಮೋದಿ ಸರ್ಕಾರ, ಅದಾನಿ ಗ್ರೂಪ್ ಗೆ​​ ಹೆಚ್ಚೆಚ್ಚು ಟೆಂಡರ್ ನೀಡುತ್ತದೆ. ಅಲ್ಲದೇ ಅದಾನಿ ರಕ್ಷಣೆಗೆ ಮೋದಿ ನಿಂತಿದ್ದಾರೆ ಅಂತೆಲ್ಲ ಬಹಿರಂಗವಾಗಿ ಟೀಕಿಸಿದ್ದಾರೆ. ಆದರೆ ಇದೀಗ ಇತ್ತ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಅದೇ ಅದಾನಿ ಗ್ರೂಪ್‌ಗೆ ಸಾವಿರಾರು ಕೋಟಿ ಮೊತ್ತದ ಟೆಂಡರ್ ನೀಡುವ ಅನಿವಾರ್ಯತೆ ಎದುರಾಗಿದೆ. ಒಂದು ಕಡೆ ಅಂದಾಜು ಮೊತ್ತಕ್ಕೆ ಹೆಚ್ಚಿಗೆ ಬಿಡ್ ಮಾಡಿದೆ. ಇನ್ನೊಂದೆಡೆ ಟೀಕಿಸುವ ನಾವೇ ಟೆಂಡರ್ ಕೊಟ್ರೆ ಹೇಗೆ ಎನ್ನುವ ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ ಸರ್ಕಾರ ಸಿಲುಕಿದೆ.

ವರದಿ : ಲಾವಣ್ಯ ಅನಿಗೋಳ

 

About The Author