”ಅಂದೇ ಕ್ರಿಕೆಟ್ ಬಿಡಲು ಯೋಚಿಸಿದ್ದೆ” ಸತ್ಯ ಬಿಚ್ಚಿಟ್ಟ ರೋಹಿತ್ ಶರ್ಮಾ

ಇಂದು 38ರ ಹರೆಯದಲ್ಲೂ ಭರ್ಜರಿ ಫಾರ್ಮ್‌ನಲ್ಲಿ ಆಟ ಮುಂದುವರಿಸುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೂ ಒಂದು ಹಂತದಲ್ಲಿ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ತೊರೆಯಬೇಕು ಎಂಬ ಯೋಚನೆ ಬಂದಿತ್ತು ಎಂಬ ಅಚ್ಚರಿ ಮಾಹಿತಿ ಬೆಳಕಿಗೆ ಬಂದಿದೆ. BCCIಯಿಂದ ನಿವೃತ್ತಿ ಕುರಿತು ಒತ್ತಡಗಳ ನಡುವೆಯೂ, ಮತ್ತೆ ಮೈದಾನಕ್ಕಿಳಿದು ಭರ್ಜರಿ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಅವರಿಗೆ, ಒಂದು ಹಂತದಲ್ಲಿ ‘ಕ್ರಿಕೆಟ್ ಸಾಕು, ಎಲ್ಲವನ್ನೂ ಬಿಟ್ಟು ಹೊರಟು ಹೋಗಬೇಕು’ ಎಂಬ ಭಾವನೆ ಬಂದಿತ್ತಂತೆ.

ಮೈದಾನವನ್ನೇ ತೊರೆಯಬೇಕು ಎಂದು ನಿರ್ಧರಿಸಿದ್ದರೂ, ನಂತರ ಆತ್ಮಾವಲೋಕನ ಮಾಡಿಕೊಂಡು ಕ್ರಿಕೆಟ್ ಮುಂದುವರಿಸುವ ತೀರ್ಮಾನಕ್ಕೆ ಬಂದಿದ್ದಾರೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎದುರಿಸಿದ ಸೋಲು, ರೋಹಿತ್ ಶರ್ಮಾ ಅವರನ್ನು ತೀವ್ರವಾಗಿ ಕಾಡಿತ್ತು. ಆ ಪರಾಭವದಿಂದ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು ಎಂದು ಅವರು ಸ್ವತಃ ಹೇಳಿದ್ದಾರೆ. “ನಮ್ಮ ಏಕೈಕ ಗುರಿ ವಿಶ್ವಕಪ್ ಗೆಲ್ಲುವುದಾಗಿತ್ತು.

ಅದು ಸಾಧ್ಯವಾಗದಿದ್ದಾಗ ನಾನು ಸಂಪೂರ್ಣವಾಗಿ ಕುಗ್ಗಿಹೋದೆ, ಎಂದು ರೋಹಿತ್ ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ನಡೆದ ‘ಮಾಸ್ಟರ್ಸ್ ಯೂನಿಯನ್’ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್ ಶರ್ಮಾ, “2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ, ಕ್ರಿಕೆಟ್ ಆಡುವುದನ್ನೇ ನಿಲ್ಲಿಸಿಬಿಡಬೇಕು ಎಂಬ ಯೋಚನೆ ನನ್ನ ತಲೆಗೆ ಬಂದಿತ್ತು,” ಎಂದು ಬಹಿರಂಗಪಡಿಸಿದರು.

ಇಡೀ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಸೋಲದೇ ಫೈನಲ್ ಪ್ರವೇಶಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಂತಿಮ ಪಂದ್ಯದಲ್ಲಿ ಸೋತಾಗ ಸಮಸ್ತ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯಗಳು ಚೂರಾಗಿ ಹೋಗಿದ್ದವು. ಆ ಸೋಲಿನ ನೋವು ರೋಹಿತ್ ಅವರನ್ನು ಮಾನಸಿಕವಾಗಿ ಸಂಪೂರ್ಣ ಕುಗ್ಗಿಸಿತ್ತು.

“ನನಗೆ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಇದು ನನಗೆ ಎಷ್ಟು ಇಷ್ಟವಾದ ಆಟ ಎಂಬುದನ್ನು ನಾನು ನನ್ನೊಳಗೆ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೆ. ಇದನ್ನು ನಾನು ಅಷ್ಟು ಸುಲಭವಾಗಿ ಬಿಟ್ಟುಬಿಡಲು ಸಾಧ್ಯವಿಲ್ಲ ಎಂಬುದು ನನಗೆ ಅರಿವಾಯಿತು. ನಿಧಾನವಾಗಿ ನನ್ನ ದಾರಿಯನ್ನು ನಾನು ಕಂಡುಕೊಂಡೆ. ಶಕ್ತಿಯನ್ನು ಮರಳಿ ಪಡೆದು ಮತ್ತೆ ಮೈದಾನದಲ್ಲಿ ಸಕ್ರಿಯನಾಗಲು ಪ್ರಾರಂಭಿಸಿದೆ,” ಎಂದು ರೋಹಿತ್ ವಿವರಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author