ಬೆಂಗಳೂರಿಗೆ ಮತ್ತೊಂದು ಹೊಸ ಏರ್‌ಪೋರ್ಟ್

ಬೆಂಗಳೂರು ನಗರಕ್ಕೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಸೂಕ್ತ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಗುರುತಿಸಲಾದ ಮೂರು ಸ್ಥಳಗಳಲ್ಲಿ ಯಾವುದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೆಚ್ಚು ಸೂಕ್ತ ಎಂಬುದನ್ನು ನಿರ್ಧರಿಸಲು ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIDC) ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ವರದಿ (DFR) ಸಿದ್ಧಪಡಿಸಲು ಮುಂದಾಗಿದೆ.

ರಾಜ್ಯ ಸರ್ಕಾರವು ಎರಡನೇ ವಿಮಾನ ನಿಲ್ದಾಣಕ್ಕಾಗಿ ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆಯ ಮಧ್ಯದಲ್ಲಿರುವ ಚೂಡಹಳ್ಳಿ, ಕನಕಪುರ ರಸ್ತೆಯ ಸೋಮನಹಳ್ಳಿ ಬನ್ನೇರುಘಟ್ಟ ಸಮೀಪ ಹಾಗೂ ನೆಲಮಂಗಲ ಸಮೀಪದ ಜಾಗಗಳನ್ನು ಈಗಾಗಲೇ ಗುರುತಿಸಿದೆ. ಕಳೆದ ಕೆಲ ತಿಂಗಳುಗಳ ಹಿಂದೆ AAI ತಂಡ ಈ ಮೂರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಲಂಕುಷ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಆದರೆ AAI ಸಲ್ಲಿಸಿದ ವರದಿಯಲ್ಲಿ ಮೂರು ಸ್ಥಳಗಳಲ್ಲಿ ಯಾವುದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಎಂಬುದರ ಬಗ್ಗೆ ಯಾವುದೇ ಅಂತಿಮ ಶಿಫಾರಸು ನೀಡಲಾಗಿಲ್ಲ. ಬದಲಾಗಿ, ಆ ಸ್ಥಳಗಳಲ್ಲಿರುವ ಲೋಪದೋಷಗಳು ಮತ್ತು ತಾಂತ್ರಿಕ ಅಡಚಣೆಗಳ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಸ್ವತಂತ್ರ ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ KSIDC ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಖಾಸಗಿ ಸಂಸ್ಥೆಯನ್ನು ಆಯ್ಕೆ ಮಾಡಿ ಅಧ್ಯಯನ ವರದಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಟೆಂಡರ್ ಪಡೆಯುವ ಖಾಸಗಿ ಸಂಸ್ಥೆಯು ಮೊದಲು AAI ನೀಡಿರುವ ವರದಿಯ ಸಮಗ್ರ ಮೌಲ್ಯಮಾಪನ ಮಾಡಬೇಕು. ನಂತರ ರಾಜ್ಯ ಸರ್ಕಾರ ಗುರುತಿಸಿರುವ ಮೂರು ಸ್ಥಳಗಳಿಗೆ ಸ್ಥಳ ಪರಿಶೀಲನೆ ನಡೆಸಿ ತಾಂತ್ರಿಕ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಮೌಲ್ಯಮಾಪನ ಸಲ್ಲಿಸಬೇಕಾಗಿದೆ.

ಅಧ್ಯಯನದಲ್ಲಿ ಆ ಜಾಗಗಳ ಭೌತಿಕ ಗುಣಲಕ್ಷಣಗಳು, ಮಳೆ ಸೇರಿದಂತೆ ಹವಾಮಾನ ಪರಿಸ್ಥಿತಿ, ವಿದ್ಯುತ್ ಹಾಗೂ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಅಗತ್ಯ ಮೂಲಸೌಕರ್ಯದ ಲಭ್ಯತೆ ಬಗ್ಗೆ ವಿವರ ನೀಡಬೇಕಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸುವುದರ ಜತೆಗೆ, ನಿರ್ಮಾಣದ ನಂತರ ಆ ಭಾಗದಲ್ಲಿ ಎಷ್ಟು ಪ್ರಮಾಣದ ಪ್ರಯಾಣಿಕರ ಸಂಚಾರ ಇರಲಿದೆ ಎಂಬುದರ ಮೇಲೂ ವಿಶೇಷ ಅಧ್ಯಯನ ನಡೆಸಲು KSIDC ನಿರ್ಧರಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author