ಕೇರಳದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸೋನಿಯಾಗಾಂಧಿಯವರ ಹೆಸರು ಕೇಳಿ ಬರ್ತಾಯಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕರು ಸರ್ಕಾರದ ಮೇಲೆಯೇ ಅಸಂಬದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸುಳ್ಳು ಪ್ರಚಾರ ನಡೆಸುವ ಬದಲು, ಪ್ರಕರಣದ ಪ್ರಮುಖ ಆರೋಪಿಗಳಾದ ಚಿನ್ನದ ವ್ಯಾಪಾರಿ ಗೋವರ್ಧನ್ ಮತ್ತು ಉನ್ನಿಕೃಷ್ಣನ್ ಪೊಟ್ಟಿ ಅವರೊಂದಿಗೆ ಇದ್ದದ್ದು ಸೋನಿಯಾ ಗಾಂಧಿಯವರದ್ದು ಎಂಬ ಫೋಟೋ ವೈರಲ್ ಆಗಿದೆ. ಅದರ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ಗೋವರ್ಧನ್, ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ. ರೊದ್ದಂ ಜ್ಯುವೆಲ್ಲರಿ ಮಾಲೀಕರಾಗಿದ್ದಾರೆ. ಕಳ್ಳತನ ಪ್ರಕರಣದ ತನಿಖೆ ನಡೆಸ್ತಿರುವ ಕೇರಳದ ಎಸ್ಐಟಿ ಅಧಿಕಾರಿಗಳು, ಗೋವರ್ಧನ್ನನ್ನ ಬಂಧಿಸಿದ್ರು. ಈ ಹಿಂದೆ ಎಸ್ಐಟಿ ಅಧಿಕಾರಿಗಳು, ಇವರ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿತ್ತು. ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ನಿಂದ ಗೋವರ್ಧನ್ ಚಿನ್ನ ಖರೀದಿಸಿರೋ ಆರೋಪವಿದೆ. ವಿಚಾರಣೆಗೆಂದು ಕರೆಸಿ ಇದೀಗ ಬಂಧನಕ್ಕೆ ಒಳಪಡಿಸಿದ್ರು.
ವಿಜಯನ್ ಇನ್ನಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಕೇರಳದ ಮಾಜಿ ಮುಖ್ಯಮಂತ್ರಿ ಕರುಣಾಕರನ್ ಅಥವಾ ಅಸ್ಸಾಂ ಸಿಎಂ ಹಿಮಂತ ಬಿಸ್ವಾಶರ್ಮಾ ಅವರಿಗೆ ಸೋನಿಯಾ ಗಾಂಧಿಯಿಂದ ಅಪಾಯಿಂಟ್ಮೆಂಟ್ ಸಿಗಲಿಲ್ಲವಾದರೆ, ಶಬರಿಮಲೆ ಚಿನ್ನ ಕಳ್ಳತನದ ಆರೋಪಿಗೆ ಹೇಗೆ ಸಿಕ್ಕಿತು? ಇದು ಯಾವ ರೀತಿಯ ಸಂಬಂಧ? ಎಂದು ಚುಟುಕುವಾಗಿ ಪ್ರಶ್ನಿಸಿದರು.
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ಸರ್ಕಾರಕ್ಕೆ ನಂಟಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದು, ತನಿಖೆ ಸರಿಯಾದ ದಾರಿಗೆ ಸಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ವರದಿ : ಲಾವಣ್ಯ ಅನಿಗೋಳ




