ಉದ್ಯೋಗಿಗೆ ಮನೆಗೆ ಬಿಟ್ಟು ಬರುತ್ತೇವೆಂಬ ನೆಪದಲ್ಲಿ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ ಹೀನ ಕೃತ್ಯ ರಾಜಸ್ಥಾನದ ಉದಯಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಐಟಿ ಕಂಪನಿಯ ಸಿಇಒ ಜಿತೇಶ್ ಸಿಸೋಡಿಯಾ ಸೇರಿದಂತೆ ಮೂವರು ಬಂಧಿತರಾಗಿದ್ದಾರೆ. ಬಂಧಿತರಲ್ಲಿ ಕಂಪನಿಯ ಮಹಿಳಾ ಮುಖ್ಯಸ್ಥೆ ಶಿಲ್ಪಾ ಸಿರೋಹಿ ಹಾಗೂ ಆಕೆಯ ಪತಿ ಗೌರವ್ ಸಿರೋಹಿ ಸೇರಿದ್ದಾರೆ.
ಕಳೆದ ಶನಿವಾರ ಘಟನೆ ಸಂಭವಿಸಿದ್ದು, ಈಗ ವಿಳಂಬವಾಗಿ ಬಹಿರಂಗವಾಗಿದೆ. ಸಂತ್ರಸ್ತೆಯ ಪ್ರಕಾರ, ಡಿಸೆಂಬರ್ 20ರಂದು ಕಂಪನಿ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿ ನಂತರ ಶಿಲ್ಪಾ ಸಿರೋಹಿ ತಾನೇ ಕಾರಿನಲ್ಲಿ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿಕೊಂಡಿದ್ದಳು. ಕಾರಿನಲ್ಲಿ ಸಿಇಒ ಹಾಗೂ ಗೌರವ್ ಕೂಡ ಇದ್ದರು. ಇವರು ಮೂವರೂ ಉತ್ತರ ಪ್ರದೇಶದ ಮೀರತ್ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ದಾರಿಯಲ್ಲಿ ಆರೋಪಿಗಳು ಅಮಲಿನ ಪದಾರ್ಥವನ್ನು ಸಿಗರೇಟ್ ರೂಪದಲ್ಲಿ ಬಲವಂತವಾಗಿ ನೀಡಿ, ಬಳಿಕ ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಬೆಳಿಗ್ಗೆ ಎಚ್ಚರವಾದಾಗ ಅತ್ಯಾಚಾರ ನಡೆದಿರುವುದು ಅರಿವಾಗಿದೆ ಎಂದು ತನ್ನ ದೂರುದಲ್ಲಿ ತಿಳಿಸಿದ್ದಾರೆ.
ಪೊಲೀಸರು ಮೂವರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. “ಸಂತ್ರಸ್ತೆಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ,” ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಗೋಯಲ್ ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ಬಂಧನ ಕ್ಕೊಳಗಾಗಿರುವ ಸಿಇಒ ಜಿತೇಶ್ ಅವರ ಕಂಪನಿಯು ಮಹಿಳಾ ಸ್ನೇಹಿ ಮಾನದಂಡ ವಿಚಾರದಲ್ಲಿ 5ರಲ್ಲಿ 4.7 ರೇಟಿಂಗ್ ಹೊಂದಿತ್ತು ಎನ್ನುವ ಮಾಹಿತಿ ಕೂಡ ಸಮಾಜದಲ್ಲಿ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
ವರದಿ : ಲಾವಣ್ಯ ಅನಿಗೋಳ




