ಮದ್ರಾಸ್ ಹೈಕೋರ್ಟ್, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಗೊಳಿಸುವ ಕುರಿತು ಆಸ್ಟ್ರೇಲಿಯಾ ಮಾದರಿಯಲ್ಲಿ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದೆ. ಮಕ್ಕಳನ್ನು ಅಶ್ಲೀಲ ವಿಷಯಗಳಿಂದ ರಕ್ಷಿಸುವುದು ಅತ್ಯಂತ ಅವಶ್ಯಕ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಷಕರ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳಿಗೆ ನಿರ್ದೇಶನ ನೀಡುವಂತೆ ಕೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಕುರಿತ ಜಾಗೃತಿ ಅಭಿಯಾನಗಳನ್ನು ಸರ್ಕಾರ ಮತ್ತು ಮಕ್ಕಳ ಹಕ್ಕು ರಕ್ಷಣಾ ಆಯೋಗಗಳು ತೀವ್ರಗೊಳಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಆಸ್ಟ್ರೇಲಿಯಾ ಸರ್ಕಾರ ಡಿಸೆಂಬರ್ 9ರಿಂದ 16 ವರ್ಷದೊಳಗಿನವರು ಸೋಶಿಯಲ್ ಮೀಡಿಯಾ ಖಾತೆ ತೆರೆಯುವುದನ್ನು ನಿಷೇಧಿಸಿರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ಭಾರತವೂ ಇಂಥ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ವರದಿ : ಲಾವಣ್ಯ ಅನಿಗೋಳ




