ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ನಿರಂತರವಾಗಿ ಕುಸಿಯುತ್ತಿದ್ದು, ಡಿಸೆಂಬರ್ 31 ಮತ್ತು ಜನವರಿ 1ರಂದು ಹಲವು ಜಿಲ್ಲೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಕ್ರಮೇಣ ಏರಿಕೆ ಕಾಣಲಿದೆ.
ಬಯಲು ಪ್ರದೇಶಗಳಲ್ಲಿ ವಿಜಯಪುರದಲ್ಲಿ ಕಡಿಮೆ ತಾಪಮಾನ ದಾಖಲಾಗಿದ್ದು, 9.5 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಜ್ಯದ ಒಳನಾಡಿನ ಹಲವು ಪ್ರದೇಶಗಳು ಮಂಜು ಮುಸುಕಿನಿಂದ ಆವೃತ್ತಿಯಾಗಿದ್ದು, ಸಾಮಾನ್ಯಕ್ಕಿಂತ 4-6 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ಅನುಭವಿಸುತ್ತಿದೆ.
ಬಂಗಾಳಕೊಲ್ಲಿಯ ನೈಋತ್ಯ ಹಾಗೂ ಉತ್ತರ ತಮಿಳುನಾಡಿನ ಮೇಲಿರುವ ವಾಯುಮಂಡಲದ ಅಶಾಂತಿ ಪರಿಣಾಮವಾಗಿ ದಕ್ಷಿಣ ತಮಿಳುನಾಡು ಭಾಗದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ಎತ್ತರದಲ್ಲಿ ಕಡಿಮೆಯ ಒತ್ತಡ ನಿರ್ಮಾಣವಾಗಿದೆ. ಇದರಿಂದ ರಾಜ್ಯದಾದ್ಯಂತ ದಕ್ಷಿಣ-ಪೂರ್ವ ದಿಕ್ಕಿನ ಗಾಳಿಗಳು ಬೀಸುವ ಸಾಧ್ಯತೆಯಿದೆ ಎಂದು ವಾತಾವರಣ ಇಲಾಖೆ ಪ್ರಕಟಿಸಿದೆ.
ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 31 ಹಾಗೂ ಜನವರಿ 1ರಂದು ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಮಂಡ್ಯ, ಚಾಮರಾಜನಗರ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣಹವೆಯೊಂದಿಗೆ ತುಸು ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆ ವಾತಾವರಣ ಮುಂದುವರಿಯಲಿದೆ. ಉತ್ತರ ಆಂತರಿಕ ಕರ್ನಾಟಕದ ಬೀದರ್ನಲ್ಲಿ ಶೀತ ಅಲೆಗಳ ಪರಿಸ್ಥಿತಿ ಇದೆ. ನೈಜ ಸಮಯದ ಮಾಹಿತಿಯ ಆಧಾರದ ಮೇಲೆ, ವಿಜಯಪುರ, ಬೀದರ್, ಬೆಳಗಾವಿಯಲ್ಲಿ ಕನಿಷ್ಠ ತಾಪಮಾನವು 8-12 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ.
ಬೆಳಗಾವಿ ವಿಮಾನ ನಿಲ್ದಾಣ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಒಳ ಕರ್ನಾಟಕದ ರಾಯಚೂರು ಮತ್ತು ಹಾಸನ, ಮೈಸೂರು, ಶಿವಮೊಗ್ಗ, ಮಂಡ್ಯ, ದಕ್ಷಿಣ ಆಂತರಿಕ ಕರ್ನಾಟಕದ ದಾವಣಗೆರೆ, ಕಲಬುರಗಿ ಮತ್ತು ಕೊಪ್ಪಳದ ಉತ್ತರ ಒಳಭಾಗ, ಚಿಂತಾಮಣಿ, ಚಿತ್ರದುರ್ಗ, ಬೆಂಗಳೂರು ಏರ್ಪೋರ್ಟ್, ಬೆಂಗಳೂರು ನಗರ, ಕರಾವಳಿ ಕರ್ನಾಟಕದ ಹೊನ್ನಾವರ, ಕಾರವಾರ, ಮಂಗಳೂರು ಭಾಗದಲ್ಲಿ ತಾಪಮಾನ ಕಡಿಮೆಯಾಗಿದೆ.
ವರದಿ : ಲಾವಣ್ಯ ಅನಿಗೋಳ




