ಬತ್ತಿಯ ಹಿಂದೆ ಎಣ್ಣೆ ಇದೆ, ಕಷ್ಟ ಬತ್ತಿಗೆ ಗೊತ್ತಿಲ್ಲ– DK

ಇತ್ತೀಚಿನ ದಿನಗಳಲ್ಲಿ ವೈರಾಗ್ಯ ಮತ್ತು ಆಧ್ಯಾತ್ಮ ಕುರಿತಂತೆ ಮಾತನಾಡುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶನಿವಾರ ಗಮನ ಸೆಳೆಯುವ ಭಾಷಣ ಮಾಡಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಮತ್ತು ರೈತ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ದೀಪದ ಹಿಂದೆ ಎಣ್ಣೆ ಇದೆ. ಕಷ್ಟ ಏನು ಅಂತ ಬತ್ತಿಗೆ ಗೊತ್ತಿಲ್ಲ. ಬತ್ತಿಯ ಸಂಕಷ್ಟ ಯಾರಿಗೂ ಕಾಣುವುದಿಲ್ಲ ಎಂದು ವೇದಾಂತಿಯಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಕುಮಾರ್‌ ಅವರು ದೀಪ, ಬತ್ತಿ, ಡೋಲು, ತಮಟೆ, ಗಣೇಶ ಮುಂತಾದ ಉದಾಹರಣೆಗಳನ್ನು ನೀಡುತ್ತಾ ಹೇಳಿದರು. ವಸ್ತುವೊಂದರ ಮೂಲ ಎಲ್ಲಿಯೋ ಇರುತ್ತದೆ, ಆದರೆ ಅದಕ್ಕೆ ಅಲಂಕಾರ ನೀಡಿದ ನಂತರ ಹೊಸ ರೂಪ ಪಡೆಯುತ್ತದೆ. ಬಳಿಕ ಮೂಲವನ್ನು ಮರೆಯಲಾಗುತ್ತದೆ. ಬದುಕಿನಲ್ಲಿ ಶ್ರಮ ಬಹಳ ದೊಡ್ಡದು. ದೀಪದ ಬೆಳಕು ಮಾತ್ರ ಕಾಣುತ್ತದೆ, ಬತ್ತಿಯ ಸಂಕಷ್ಟ ಯಾರಿಗೂ ಕಾಣಿಸುವುದಿಲ್ಲ.

‘ಬಿದಿರಿನ ಬೊಂಬಿನಲ್ಲಿ ಕೊಳಲು ತಯಾರು ಮಾಡುತ್ತಾರೆ. ಆ ಕೊಳಲಿನಿಂದ ಎಂತಹ ನಾದ ಬರುತ್ತದೆ ಎಂದು ಆ ಬೊಂಬಿಗೇ ತಿಳಿದಿರುವುದಿಲ್ಲ. ಕೃಷ್ಣನ ಕೊಳಲಿನ ನಾದ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿದೆ. ಕುರಿ, ಕೋಣ, ಮೇಕೆಯ ಚರ್ಮದಲ್ಲಿ ತಮಟೆ ಮಾಡುತ್ತೇವೆ. ನಾನು ಇಲ್ಲಿಗೆ ಆಗಮಿಸಿದಾಗ ಚೆನ್ನಾಗಿ ಡೋಲು ಬಾರಿಸಿದರು. ಆದರೆ ಈಗ ಕೆಲವರು ಪ್ಲಾಸ್ಟಿಕ್‌ನಲ್ಲಿ ಡೋಲು ತಯಾರಿಸುತ್ತಾರೆ. ಆದರೆ ಡೋಲಿನ ಮೂಲ ಎಲ್ಲಿಯದು? ಕುರಿ, ಕೋಣ, ಮೇಕೆಯ ಚರ್ಮದಿಂದ ಬಂದಿದ್ದು ತಾನೇ’ ಎಂದು ಅವರು ಪ್ರಶ್ನಿಸಿದರು.

ಈ ವೇಳೆ, ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಕುರಿತ ಚರ್ಚೆ ಉತ್ಸಾಹದಲ್ಲಿ ಇರುವ ಸಂದರ್ಭ, ಡಿಕೆಶಿ ಈ ರೀತಿಯಾಗಿ ಒಗಟಾಗಿ ಮಾತನಾಡಿರುವುದು ಬಹುಮಾನ್ಯ ರಾಜಕೀಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಶೀತಲ ಸಮರ ನಡೆದ ಹಿನ್ನೆಲೆಯಲ್ಲಿ, ಈ ಭಾಷಣ ಹೆಚ್ಚು ಗಮನ ಸೆಳೆದಿದೆ. ತಮ್ಮ ಕಷ್ಟದ ಕೆಲಸಗಳನ್ನು ಗುರುತಿಸಲಾಗುತ್ತಿಲ್ಲ ಎಂಬ ಅರ್ಥವೂ ಈ ಮಾತುಗಳಿಂದ ಹೊರಬಂದಿದೆ.

 

 

About The Author