ಅಧಿಕಾರ ಗೊಂದಲದ ನಡುವೆ ‘ಟಗರು’ ಹೊಸ ದಾಖಲೆ

ಅಧಿಕಾರ ಹಂಚಿಕೆ ಗೊಂದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ದಾಖಲೆ ಬರೆಯುವ ಹಂತಕ್ಕೆ ತಲುಪುತ್ತಿದ್ದಾರೆ. ಕರ್ನಾಟಕದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಗೌರವವನ್ನು ಪಡೆಯಲು ಅವರು ಇನ್ನೊಂದೇ ವಾರದ ದೂರದಲ್ಲಿದ್ದಾರೆ.

ಇಲ್ಲಿಯವರೆಗೆ 5 ವರ್ಷಕ್ಕಿಂತ ಹೆಚ್ಚು ಕಾಲ ಸಿಎಂ ಸ್ಥಾನ ನಿರ್ವಹಿಸಿರುವವರು ಐವರು ಮಾತ್ರ. ಅವರಲ್ಲಿ ದೇವರಾಜ ಅರಸು ಅತಿ ಹೆಚ್ಚು ಅವಧಿ ಮುಖ್ಯಮಂತ್ರಿ ಆಗಿ 7 ವರ್ಷ 239 ದಿನ ಆಡಳಿತ ನಡೆಸಿದ್ದಾರೆ. ಈ ದಾಖಲೆಯನ್ನು ಜನವರಿ 7ರಂದು ಸಿದ್ದರಾಮಯ್ಯ ಮುರಿಯೋಕೆ ರೆಡಿ ಆಗಿದ್ದಾರೆ.

ಸಿದ್ದರಾಮಯ್ಯ ಅವರು ಮೊದಲ ಬಾರಿಗೆ 2013ರಲ್ಲಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿ ಪೂರ್ಣ 5 ವರ್ಷಗಳ ಆಡಳಿತ ನೀಡಿದ್ದಾರೆ. 2023ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಮರಳಿದ ಅವರು, ಈಗ ಎರಡೂವರೆ ವರ್ಷ ಪೂರೈಸುತ್ತಿದ್ದಾರೆ. ಜನವರಿ ಮೊದಲ ವಾರ ಕಳೆದ ನಂತರ ಅವರು ಕರ್ನಾಟಕದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

2 ದಶಕ ಸಿಎಂ ಆಗಿ ಚರಿತ್ರೆ ಸೃಷ್ಟಿಸಿದವರಿದ್ದಾರೆ. ಆದರೆ, ಕರ್ನಾಟಕದ ಮಟ್ಟಿಗೆ ಈ ಅವಕಾಶ ಸಿಕ್ಕಿರುವುದು ಬಲು ಅಪರೂಪ. ‘ಅಹಿಂದ’ ಸಮೀಕರಣಕ್ಕೆ ಪುಷ್ಟಿ ನೀಡಿ ಪುಟಿದೆದ್ದ ಸಿಎಂ, ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳನ್ನು ಸೃಷ್ಟಿಸಿ, ಬೆಳೆದು ನಿಂತವರು. ಲೋಕದಳ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿ, ಬಳಿಕ ಜನತಾದಳದಲ್ಲಿ ನೆಲೆ ಕಂಡುಕೊಂಡವರು. ಆ ಪಕ್ಷದಿಂದ ಗೆದ್ದು ಡಿಸಿಎಂ ಆಗಿದ್ದವರು, 2006ರಲ್ಲಿ ಕಾಂಗ್ರೆಸ್ ಸೇರಿ, ವಿರೋಧ ಪಕ್ಷದ ನಾಯಕರಾಗಿದ್ದರು.

ದೇಶ ಮಟ್ಟದಲ್ಲಿ ಹಲವಾರುವರು 4-5 ಅವಧಿಗೂ ಸಿಎಂ ಆಗಿರುವ ಇತಿಹಾಸವಿದ್ದರೂ, ಕರ್ನಾಟಕದಲ್ಲಿ ಇಂತಹ ಅವಕಾಶ ಅತ್ಯಂತ ಅಪರೂಪ. ‘ಅಹಿಂದ’ ಸಮೀಕರಣವನ್ನು ಬಲಪಡಿಸಿ, ನಾಯಕನಾಗಿ ಬೆಳೆಯುತ್ತಿರುವ ಸಿದ್ದರಾಮಯ್ಯ ಅವರ ರಾಜಕೀಯ ಪಯಣದಲ್ಲಿ ಇದು ಮಹತ್ವದ ಘಟ್ಟವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author