ಗ್ರಾಮೀಣ ಭಾಗಗಳ ಸಾರಿಗೆ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 644 ಹೊಸ BS–6 ಡೀಸೆಲ್ ಚಾಲಿತ ಬಸ್ಗಳನ್ನು ಪರಿಚಯಿಸಲು ಮುಂದಾಗಿದೆ. ಸೀಮಿತ ಸಾರಿಗೆ ವ್ಯವಸ್ಥೆ ಹೊಂದಿರುವ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಂಪರ್ಕ ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಕೆಎಸ್ಆರ್ಟಿಸಿಯಲ್ಲಿ ಹೊಸ ಬಸ್ಗಳ ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಈ ವಿಸ್ತರಣೆಯ ಭಾಗವಾಗಿ, ಪ್ರಸ್ತಾವಿತ ಯೋಜನೆಯಲ್ಲಿ 500 ಸಾಮಾನ್ಯ ಬಸ್ಗಳು ಹಾಗೂ 144 ಎರಡು ಬಾಗಿಲುಗಳಿರುವ ಮೊಪ್ಪುಸಿಲ್ ಬಸ್ಗಳನ್ನು ಖರೀದಿಸಲು ನಿಗಮ ಉದ್ದೇಶಿಸಿದೆ. ಇದರಲ್ಲಿನ ಬಹುತೇಕ ಬಸ್ಗಳನ್ನು ಗ್ರಾಮೀಣ ಮಾರ್ಗಗಳಿಗೆ ಮೀಸಲಿಟ್ಟು, ರಾಜ್ಯದ ಪ್ರಮುಖ ಪ್ರದೇಶಗಳ ನಡುವೆ ಸಂಚರಿಸಲು ನಿಯೋಜಿಸಲಾಗುತ್ತದೆ. ಬೇಡಿಕೆ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ಸಾರಿಗೆ ನಿಗಮಗಳಿಂದ ಕರ್ನಾಟಕದಲ್ಲಿ ಒಟ್ಟು 26,028 ಬಸ್ಗಳು ಕಾರ್ಯಾಚರಿಸುತ್ತಿವೆ. ಇದರಲ್ಲಿ KSRTC – 8,759, BMTC – 7,051, NWKRTC – 5,289 ಹಾಗೂ KKRTC – 4,929 ಬಸ್ಗಳು ಕಾರ್ಯಾಚರಿಸುತ್ತಿವೆ. 2023-24, 2025-26 ರಲ್ಲಿಯೇ ಹೊಸದಾಗಿ 1,288 ಬಸ್ಗಳನ್ನು ಸೇರ್ಪಡೆ ಮಾಡಿಕೊಂಡಿದೆ. ಇದನ್ನು ಹೊರತುಪಡಿಸಿ 70 ಹೊಸ ನಾನ್ non-AC ಖರೀದಿಗೆ ಅನುಮತಿ ನೀಡಿದ್ದು, ಮಾರ್ಚ್ ವೇಳೆಗೆ ನಿಗಮಕ್ಕೆ ಸೇರ್ಪಡೆಯಾಗಲಿವೆ.
ಈಗಾಗಲೇ ಸೇರ್ಪಡೆಯಾಗಿರುವ ಬಹುತೇಕ ಬಸ್ಗಳು ನಗರ ಪ್ರದೇಶಗಳಿಗೆ ಸೀಮಿತವಾಗಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಲವು ಆಯ್ಕೆ ಮಾರ್ಗಗಳ ಬಸ್ ಪ್ರಯಾಣ ದರದಲ್ಲಿ ಶೇ. 5ರಿಂದ 15ರವರೆಗೆ ರಿಯಾಯಿತಿ ಘೋಷಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರು, ಕುಂದಾಪುರ, ಉಡುಪಿ, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಪುತ್ತೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ಚೆನ್ನೈ, ಹೈದರಾಬಾದ್, ತಿರುಪತಿ, ಮಂತ್ರಾಲಯ, ಮುಂಬಯಿ, ವಿಜಯವಾಡ, ಎರ್ನಾಕುಲಂ, ಮದುರೈ, ಕೊಯಮತ್ತೂರು ಮಾರ್ಗಗಳಲ್ಲಿ ರಿಯಾಯಿತಿ ನೀಡಿದೆ.




