ಹೊಸ ವರ್ಷದ ಆರಂಭದಲ್ಲೇ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಟೋಕಿಯೊದ ಟೊಯುಸು ಮೀನು ಮಾರುಕಟ್ಟೆಯಲ್ಲಿ ನಡೆದ ವಿಶೇಷ ಹರಾಜಿನಲ್ಲಿ, ಬ್ಲೂಫಿನ್ ಟ್ಯೂನಾ ಜಾತಿಗೆ ಸೇರಿದ ಒಂದು ಮೀನು 29 ಕೋಟಿಗೆ ಮಾರಾಟವಾಗಿ ವಿಶ್ವದ ಅತಿ ದುಬಾರಿ ಮೀನು ಎಂಬ ದಾಖಲೆಗೆ ಪಾತ್ರವಾಗಿದೆ.
ಸುಮಾರು 243 ಕಿಲೋಗ್ರಾಂ ತೂಕ ಹೊಂದಿದ್ದ ಈ ಬ್ಲೂಫಿನ್ ಟ್ಯೂನಾ, ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಅತ್ಯಧಿಕ ಬೆಲೆಯಲ್ಲಿ ಮಾರಾಟವಾಗಿದೆ. ಈ ಮೀನಿನ ಪ್ರತಿ ಒಂದು ಕೆ.ಜಿ ಮಾಂಸದ ಬೆಲೆಗೆ ಐದು ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗಳನ್ನು ಖರೀದಿಸಬಹುದಾಗಿದೆ ಎಂಬುದು ಅಚ್ಚರಿ ಮೂಡಿಸಿದೆ.
ಈ ಹರಾಜು ಜನವರಿ 5ರಂದು ಟೋಕಿಯೊದ ಟೊಯುಸು ಮೀನು ಮಾರುಕಟ್ಟೆಯಲ್ಲಿ ನಡೆದಿದ್ದು, ಕಿಯೊಮುರಾ ಕಾರ್ಪೊರೇಷನ್ನ ಮಾಲೀಕ ಹಾಗೂ ‘ಸುಶಿ ಜಾನ್ಮಯಿ’ ಚೈನ್ ರೆಸ್ಟೋರೆಂಟ್ಗಳ ಸಂಸ್ಥಾಪಕ ಕಿಯೋಶಿ ಕಿಮುರಾ ಅವರು ಈ ಮೀನನ್ನು ಖರೀದಿಸಿದ್ದಾರೆ. ಪ್ರತಿವರ್ಷವೂ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡುವವರಾಗಿ ಕಿಯೋಶಿ ಕಿಮುರಾ ಪರಿಚಿತ.
ಈ ಮೂಲಕ ತಮ್ಮ ರೆಸ್ಟೋರೆಂಟ್ ಬ್ರ್ಯಾಂಡ್ಗೆ ದೊಡ್ಡ ಮಟ್ಟದ ಪ್ರಚಾರ ಪಡೆಯುತ್ತಾರೆ ಎನ್ನಲಾಗಿದೆ. ಈ ಬಾರಿ ನಡೆದ ಹರಾಜು, 2019ರಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನು ಮುರಿದಿದೆ. ಆ ವೇಳೆ 278 ಕಿಲೋಗ್ರಾಂ ತೂಕದ ಬ್ಲೂಫಿನ್ ಟ್ಯೂನಾ ಮೀನು ರೂ.17 ಕೋಟಿಗೆ ಮಾರಾಟವಾಗಿತ್ತು.
ಹೊಸ ವರ್ಷದ ಆರಂಭದಲ್ಲೇ ನಡೆದ ಈ ಹರಾಜು, ಜಪಾನ್ನ ಮೀನು ವ್ಯಾಪಾರ ಕ್ಷೇತ್ರದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ.
ವರದಿ : ಲಾವಣ್ಯ ಅನಿಗೋಳ




