ಆಡಳಿತಾರೂಢ ಕಾಂಗ್ರೆಸ್ನಲ್ಲಿ ‘ನಾಯಕತ್ವ’ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಮಂಡನೆಗೆ ಸಿದ್ಧತೆ ಆರಂಭಿಸಿದ್ದಾರೆ. ಮಾಹಿತಿ ಪ್ರಕಾರ, ಮಾರ್ಚ್ 6ರಂದು 2026–27ನೇ ಆರ್ಥಿಕ ಸಾಲಿನ ಆಯವ್ಯಯವನ್ನು ಮಂಡಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಶಾಸಕ ಕೆ.ಎನ್.ರಾಜಣ್ಣ ಅವರ ‘ಆಗಸ್ಟ್ ಕ್ರಾಂತಿ’ ಕುರಿತ ಹೇಳಿಕೆಗಳು ಪಕ್ಷದೊಳಗೆ ಸಾಕಷ್ಟು ಪ್ರತಿಕ್ರಿಯೆ–ಪ್ರತಿಹೇಳಿಕೆಗಳಿಗೆ ಕಾರಣವಾಗಿದ್ದವು. ಇದರೊಂದಿಗೆ ಕಾಂಗ್ರೆಸ್ ಒಳಗೆ ‘ನಾಯಕತ್ವ ಬದಲಾವಣೆ’ ಕುರಿತು ಕೂಗು ಜೋರಾಗಿ, ರಾಜಕೀಯ ವಲಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಒಂದೆಡೆ, ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ನಡೆಸುತ್ತಾರೆಯೇ? ಜನವರಿ 5ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿದು ದೇವರಾಜ ಅರಸು ಅವರ ದಾಖಲೆಯನ್ನು ಹಿಂದಿಕ್ಕುತ್ತಾರೆಯೇ? ಎಂಬ ಚರ್ಚೆಗಳು ನಡೆದಿದ್ದರೆ, ಇನ್ನೊಂದೆಡೆ ಯಾವಾಗ ಬೇಕಿದ್ದರೂ ಹೈಕಮಾಂಡ್ ನಿರ್ಧಾರ ಪ್ರಕಟಿಸಬಹುದು ಎಂಬ ಊಹಾಪೋಹಗಳು ತೀವ್ರವಾಗಿದ್ದವು.
ಆದರೆ ಇತ್ತೀಚಿನ ಬೆಳವಣಿಗೆಗಳು ಕಾಂಗ್ರೆಸ್ ಒಳಗಿನ ‘ನಾಯಕತ್ವ’ದ ಚರ್ಚೆಗೆ ತಾತ್ಕಾಲಿಕ ವಿರಾಮ ನೀಡಿರುವ ಸೂಚನೆ ನೀಡುತ್ತಿವೆ. ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮೀಸಲಾತಿ ಕರಡು ಪ್ರಕಟಿಸಿರುವ ಸರ್ಕಾರ, ಮುಂದಿನ ಚುನಾವಣಾ ತಯಾರಿಯ ಮುನ್ಸೂಚನೆ ನೀಡಿದೆ.
ಇದಕ್ಕೆ ಸಮಕಾಲೀನವಾಗಿ, ಜಿ–ರಾಮ್ ಜಿ ಕಾಯ್ದೆ ಹಿಂಪಡೆದು, ಎಂಜಿ–ನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವ ಹೋರಾಟಕ್ಕೂ ಸರ್ಕಾರ ಸಜ್ಜಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್ ಪಕ್ಷದೊಳಗಿನ ನಾಯಕತ್ವದ ಚರ್ಚೆ ಕ್ಷೀಣಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಇದೀಗ ಸಂಪೂರ್ಣವಾಗಿ ಬಜೆಟ್ ಸಿದ್ಧತೆಯತ್ತ ಕೇಂದ್ರೀಕೃತವಾಗಿದೆ.
ವರದಿ : ಲಾವಣ್ಯ ಅನಿಗೋಳ




