ಅಶ್ಲೀಲ ಮತ್ತು ಅಸಭ್ಯ ವಿಷಯಗಳ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕಠಿಣ ಕ್ರಮಗಳ ಬೆನ್ನಲ್ಲೇ, ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (X) ಸುಮಾರು 3,500 ಪೋಸ್ಟ್ಗಳನ್ನು ನಿರ್ಬಂಧಿಸಿ, 600 ಖಾತೆಗಳನ್ನು ಡಿಲೀಟ್ ಮಾಡಿದೆ. ಸರ್ಕಾರದ ಸೂಚನೆಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು ಎಕ್ಸ್ ಸರ್ಕಾರಕ್ಕೆ ಭರವಸೆ ನೀಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಕ್ಸ್ನಲ್ಲಿ ಅಶ್ಲೀಲ ವಿಷಯವನ್ನು ಫ್ಲ್ಯಾಗ್ ಮಾಡಿದ ಒಂದು ವಾರದ ನಂತರ ಈ ಕ್ರಮವನ್ನು ತರಲಾಗಿದೆ. ಅಶ್ಲೀಲ, ನಗ್ನ, ಅಸಭ್ಯ ಹಾಗೂ ಹೋಸ್ಟಿಂಗ್, ಪ್ರಕಟಣೆ, ಅಪ್ಲೋಡ್ ಅನ್ನು ತಡೆಯುವ ಉದ್ದೇಶದಿಂದ, ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಎಕ್ಸ್ ಕಾರ್ಪ್ಗೆ 72 ಗಂಟೆಗಳೊಳಗೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸುವಂತೆ ಸಚಿವಾಲಯ ಸೂಚಿಸಿತ್ತು.
ಅಂತಹ ವಿಷಯವನ್ನು ಉತ್ಪಾದಿಸುವುದನ್ನು ತಡೆಯಲು ಗ್ರೋಕ್ನ ತಾಂತ್ರಿಕ ಮತ್ತು ಆಡಳಿತ ಚೌಕಟ್ಟುಗಳ ಸಮಗ್ರ ಪರಿಶೀಲನೆಯನ್ನು ನಡೆಸುವಂತೆ ಸಚಿವಾಲಯವು ಎಕ್ಸ್ ಅನ್ನು ಕೇಳಿದೆ. ಅಧಿಸೂಚನೆಯಲ್ಲಿ, ಎಕ್ಸ್ನ ಎಐ ಸಹಾಯಕವಾದ ಗ್ರೋಕ್ ಕಟ್ಟುನಿಟ್ಟಾದ ಬಳಕೆದಾರ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಹೇಳಲಾಗಿದ್ದು, ನಿಯಮ ಉಲ್ಲಂಘಿಸುವವರ ಖಾತೆ ಅಮಾನತು ಹಾಗೂ ರದ್ಧತಿ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ.
ಈ ಸೂಚನೆಗಳನ್ನು ಎಕ್ಸ್ ಪಾಲಿಸದಿದ್ದರೆ ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಸುರಕ್ಷಿತ ಆಶ್ರಯ ಕಳೆದುಕೊಳ್ಳಬಹುದು ಮತ್ತು ಭಾರತೀಯ ನ್ಯಾಯ ಸಂಹಿತಾ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಸೇರಿದಂತೆ ಬಹು ಕಾನೂನುಗಳ ಅಡಿಯಲ್ಲಿ ದಂಡದ ಕ್ರಮ ಕೈಗೊಳ್ಳಬಹುದು ಎಂದು ಸಚಿವಾಲಯ ಹೇಳಿದೆ.
ವರದಿ : ಲಾವಣ್ಯ ಅನಿಗೋಳ




