OPS ಇಲ್ಲ ಅಂದ್ರೆ ಕರ್ನಾಟಕ ಬಂದ್, ಬಂದ್ !

ಕರ್ನಾಟಕದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸದಿದ್ದರೆ ರಾಜ್ಯವ್ಯಾಪಿ ಕರ್ನಾಟಕ ಬಂದ್ ನಡೆಸುವುದು ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ CS ಷಡಕ್ಷರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ NPS ನೌಕರರ ಸಂಘದ 2ನೇ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, OPS ಜಾರಿಗಾಗಿ ನಾವು ನಿರಂತರ ಹೋರಾಟ ನಡೆಸುತ್ತಿದ್ದೇವೆ. ಆದರೆ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬಂದಿಲ್ಲ. ಅಗತ್ಯವಿದ್ದರೆ ಕರ್ನಾಟಕವನ್ನು ಬಂದ್ ಮಾಡಿಯಾದರೂ OPS ಪಡೆದೇ ತೀರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಹೋರಾಟದ ವೇಳೆ ಬೆದರಿಕೆಗಳಿಗೆ ಹೆದರಬೇಡಿ ಎಂದು ನೌಕರರಿಗೆ ಕರೆ ನೀಡಿದ ಸಿಎಸ್ ಷಡಕ್ಷರಿ, ನನ್ನನ್ನು ಅರೆಸ್ಟ್ ಮಾಡುತ್ತಾರೆ, ಜೈಲಿಗೆ ಕಳುಹಿಸುತ್ತಾರೆ, ಕೆಲಸದಿಂದ ಸಸ್ಪೆಂಡ್ ಮಾಡುತ್ತಾರೆ ಎಂದು ಯಾರೂ ಭಯಪಡಬೇಕಿಲ್ಲ. ಇಂತಹ ಬೆದರಿಕೆಗಳನ್ನು ನಾವು ಹಿಂದೆಯೂ ಸಾಕಷ್ಟು ನೋಡಿದ್ದೇವೆ. ದೇವರು ಕೊಟ್ಟ ಜೀವ ಮತ್ತು ಸ್ವಸಾಮರ್ಥ್ಯದ ಆಧಾರದಲ್ಲಿ ನಮಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ. ನಮ್ಮನ್ನು ಸರ್ಕಾರಿ ನೌಕರಿಯಿಂದ ತೆಗೆಯಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ OPS ಜಾರಿ ಮಾಡಿದರೆ ವಾರ್ಷಿಕ ಕನಿಷ್ಠ 5,000 ಕೋಟಿ ರೂ. ಉಳಿತಾಯವಾಗಲಿದೆ ಎಂಬ ಸಮಿತಿ ಅಂಶವನ್ನು NPS ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಬಂದ್‌ನ್ನು ಸಂಪೂರ್ಣ ಪರಿಣಾಮಕಾರಿಯಾಗಿ ನಡೆಸುವ ಅಗತ್ಯವಿದೆ ಎಂದು ಹೇಳಿದ ಅವರು, ಕರ್ನಾಟಕ ಬಂದ್ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಸರ್ಕಾರಿ ನೌಕರರು ಯಾರೂ ಕೆಲಸಕ್ಕೆ ಹಾಜರಾಗಿಲ್ಲ ಎಂಬ ವರದಿಯನ್ನು ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ನೀಡುವಂತಾಗಬೇಕು. ಹೋರಾಟದ ತೀವ್ರತೆ ಚಂಡಮಾರುತದ ರೀತಿಯಲ್ಲಿ ಇರಬೇಕು ಎಂದು ತಿಳಿಸಿದರು.

ವರದಿ : ಲಾವಣ್ಯ ಅನಿಗೋಳ

About The Author