ಬಾಡಿಗೆ ಮನೆ ಮಾಲೀಕರಿಗೆ ಪೊಲೀಸರಿಂದ ಖಡಕ್ ಸೂಚನೆ

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿ ವಲಸಿಗರು ಹಾಗೂ ಇತರೆ ವಿದೇಶಿ ಪ್ರಜೆಗಳ ಪತ್ತೆಗೆ ರಾಜ್ಯ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ, ಬಾಡಿಗೆ ಮನೆ ಮಾಲೀಕರು, ಕಟ್ಟಡ ಮಾಲೀಕರು, ಕೈಗಾರಿಕೆಗಳು ಮತ್ತು ವಿವಿಧ ಉದ್ಯಮಗಳ ಮುಖ್ಯಸ್ಥರು ತಮ್ಮಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರ ವಿವರಗಳನ್ನು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ.

ಕಳೆದ ಕೆಲ ತಿಂಗಳಿಂದ ಜನಸ್ನೇಹಿ ಪೊಲೀಸ್ ಯೋಜನೆಯಡಿ ‘ಮನೆ ಮನೆಗೆ ಪೊಲೀಸ್’ ಅಭಿಯಾನ ನಡೆಸಲಾಗುತ್ತಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಈಶಾನ್ಯ ಭಾರತದ ಪ್ರಜೆಗಳೆಂದು ಹೇಳಿಕೊಂಡು ಇತ್ತೀಚೆಗೆ ಯಾರಾದರೂ ಬಾಡಿಗೆಗೆ ಸೇರಿಕೊಂಡಿದ್ದರೆ, ಅಥವಾ ಕಂಪನಿಗಳು, ನಿರ್ಮಾಣ ಹಂತದ ಕಟ್ಟಡಗಳು, ಗಾರ್ಮೆಂಟ್‌ಗಳು, ಸೆಕ್ಯೂರಿಟಿ ಸೇವೆಗಳು, ಕೂಲಿ ಕಾರ್ಮಿಕರಾಗಿ ನೇಮಕ ಮಾಡಿಕೊಂಡಿದ್ದರೆ, ಅವರ ಗುರುತಿನ ದಾಖಲೆಗಳ ಸಮೇತ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲ ಹಿಂದೂ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳ ಸದಸ್ಯರು ಸ್ವಯಂಪ್ರೇರಿತವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೂಲಿ ಕಾರ್ಮಿಕರ ಶೆಡ್‌ಗಳು, ಗುಜರಿ ಗೋದಾಮುಗಳು, ಫಾರ್ಮ್‌ಹೌಸ್‌ಗಳು ಮತ್ತು ತೋಟಗಳಲ್ಲಿ ದಾಳಿ ನಡೆಸಿ ಕಾರ್ಮಿಕರ ದಾಖಲೆ ಪರಿಶೀಲನೆ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ.

ಪಾಸ್‌ಪೋರ್ಟ್ ಕಾಯ್ದೆ ಮತ್ತು ವಲಸಿಗರ ಕಾಯ್ದೆ ಪ್ರಕಾರ, ವಿದೇಶಿ ಪ್ರಜೆಗಳ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಆದರೆ ಕೆಲ ಮನೆ ಮಾಲೀಕರು ಮತ್ತು ಉದ್ಯಮಿಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಒಂದು ವೇಳೆ ಈ ನಿಯಮ ಉಲ್ಲಂಘನೆ ಕಂಡುಬಂದರೆ, ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಭಿಯಾನದ ವೇಳೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಸ್ಥಳೀಯ ಮಟ್ಟದಲ್ಲಿ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆ, ಬೆಂಗಳೂರು ಉತ್ತರ, ದಕ್ಷಿಣ ಸೇರಿದಂತೆ ಎಲ್ಲಾ 11 ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹ ಕಾರ್ಯವನ್ನು ಕಡ್ಡಾಯವಾಗಿ ಆರಂಭಿಸಿದ್ದಾರೆ.

ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಬೇಗೂರು, ಹೆಬ್ಬಗೋಡಿ, ಕೆ.ಆರ್.ಪುರ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇದುವರೆಗೆ 120ಕ್ಕೂ ಅಧಿಕ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಕೆಲವರನ್ನು ವಿದೇಶಿ ನಿರಾಶ್ರಿತರ ಕೇಂದ್ರಗಳು ಹಾಗೂ ಸ್ಥಳೀಯ ಕಲ್ಯಾಣ ಮಂಟಪಗಳಲ್ಲಿ ಇರಿಸಲಾಗಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಗಡಿಪಾರು ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವರದಿ : ಲಾವಣ್ಯ ಅನಿಗೋಳ

About The Author