ರಾಜ್ಯದಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದವರಿಗೆ ಮನೆ ನಿರ್ಮಾಣ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳೊಂದಿಗೆ ಮನೆಗಳನ್ನು ನಿರ್ಮಿಸಿ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಈ ಯೋಜನೆಯಡಿ, ಪ್ರತಿ ಕುಟುಂಬಕ್ಕೆ 1,200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿ ವಿಸ್ತೀರ್ಣದ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ ಸುಮಾರು ₹100 ಕೋಟಿ ಅಂದಾಜು ವೆಚ್ಚವಾಗಲಿದೆ. ಇದೇ ಸಭೆಯಲ್ಲಿ, ಪೌಷ್ಟಿಕ ಆಹಾರ ಯೋಜನೆಯಡಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಇರುವ 50,046 ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಮುಂದಿನ 12 ತಿಂಗಳ ಕಾಲ ಪೌಷ್ಟಿಕ ಆಹಾರ ಕಿಟ್ಗಳನ್ನು ವಿತರಿಸಲು ಒಪ್ಪಿಗೆ ನೀಡಲಾಗಿದೆ.
ಈ ಯೋಜನೆಗೆ ಒಟ್ಟು ₹145.03 ಕೋಟಿ ವೆಚ್ಚವಾಗಲಿದ್ದು, ಪ್ರತಿ ಕಿಟ್ನ ವೆಚ್ಚ ₹2,415.38 ಆಗಿದೆ. ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಣ ಯೋಜನೆಯಡಿ ರಾಜ್ಯದ 3,862 ಸರ್ಕಾರಿ ಪ್ರಾಥಮಿಕ, ಪ್ರೌಢ, ಹಿರಿಯ ಪ್ರೌಢ ಹಾಗೂ ಕೆಜಿಬಿವಿ ಶಾಲೆಗಳಲ್ಲಿ ಹೊಸ ಕೊಠಡಿಗಳನ್ನು ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕೆ ₹91.55 ಕೋಟಿ ಅಂದಾಜು ವೆಚ್ಚವಾಗಲಿದೆ.
ಆರೋಗ್ಯ ಕ್ಷೇತ್ರದಲ್ಲೂ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಕಲಬುರಗಿ ವಿಭಾಗದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಸೇವೆಗಳ ದರವನ್ನು ಪ್ರತಿ ಚಿಕಿತ್ಸೆಗೆ ₹1,000ರಿಂದ ₹1,500ಕ್ಕೆ ಹೆಚ್ಚಿಸಲು ಸಂಪುಟ ಸಮ್ಮತಿ ನೀಡಿದೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ, ಕೇಂದ್ರ ಪ್ರವಾಸೋದ್ಯಮ ಇಲಾಖೆಯ ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಬೀದರ್ ನಗರವನ್ನು ಸಾಂಸ್ಕೃತಿಕ ಮತ್ತು ಪಾರಂಪರಿಕ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲು ₹25 ಕೋಟಿ ವೆಚ್ಚದಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದೆ.
ವರದಿ : ಲಾವಣ್ಯ ಅನಿಗೋಳ




