‘ನಂದಿನಿ’ ಹೆಸರಿನ ಬಳಕೆಗೆ ಸಂಬಂಧಿಸಿದ ಕಾನೂನು ಕದನದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಗೆ ಮಹತ್ವದ ಜಯ ಲಭಿಸಿದೆ. ನಂದಿನಿ ಬ್ರಾಂಡ್ ಸಂಪೂರ್ಣವಾಗಿ ಕೆಎಂಎಫ್ಗೆ ಸೇರಿದ್ದು, ಇತರ ಯಾವುದೇ ಸಂಸ್ಥೆಗಳು ಈ ಹೆಸರನ್ನು ಬಳಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ನಂದಿನಿ ಎಂಬ ಹೆಸರನ್ನು ಅಗರಬತ್ತಿ ಮತ್ತು ಧೂಪ ಉತ್ಪನ್ನಗಳಿಗೆ ಟ್ರೇಡ್ಮಾರ್ಕ್ ಆಗಿ ಬಳಸಲು ಮುಂದಾಗಿದ್ದ ಶಾಲಿಮಾರ್ ಅಗರಬತ್ತಿ ಕಂಪನಿಯ ವಿರುದ್ಧ KMF ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಸಮ್ಮತಿ ನೀಡಿದ್ದು, ಈ ಮೂಲಕ ‘ನಂದಿನಿ’ ಬ್ರಾಂಡ್ ಮೇಲಿನ ಹಕ್ಕು KMF ಗೆ ಸೇರಿದೆ ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯ ತನ್ನ ತೀರ್ಪಿನಲ್ಲಿ, 1983ರಿಂದಲೂ ನಂದಿನಿ ಬ್ರಾಂಡ್ KMF ನಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೂಲಕ ಕರ್ನಾಟಕ ಹಾಗೂ ಅದರ ನೆರೆಯ ರಾಜ್ಯಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ ಎಂದು ಉಲ್ಲೇಖಿಸಿದೆ. ಇಂತಹ ಪ್ರಸಿದ್ಧ ಬ್ರಾಂಡ್ ಹೆಸರನ್ನು ಇತರ ಕಂಪನಿಗಳು ಬಳಸುವುದರಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ನಂದಿನಿ’ ಎಂಬ ಹೆಸರನ್ನು ಮಾತ್ರ ಬಳಸಿ ಅಗರಬತ್ತಿ ಅಥವಾ ಧೂಪ ಉತ್ಪನ್ನಗಳನ್ನು ಮಾರಾಟ ಮಾಡಿದರೆ, ಅವುಗಳು KMF ನ ಉತ್ಪನ್ನಗಳೆಂದು ಗ್ರಾಹಕರು ಭಾವಿಸುವ ಅಪಾಯವಿದೆ. ಇದರಿಂದ KMF ಗಳಿಸಿದ ವಿಶ್ವಾಸ ಮತ್ತು ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಂಡು ಇತರ ಕಂಪನಿಗಳು ಲಾಭ ಗಳಿಸುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ಆನಂದ್ ವೆಂಕಟೇಶನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಚಾರಣೆಯ ವೇಳೆ ಶಾಲಿಮಾರ್ ಕಂಪನಿಯ ಪರ ವಕೀಲರು, ‘ನಂದಿನಿ ಡಿಲಕ್ಸ್’ ಎಂಬ ಹೆಸರನ್ನು ಬಳಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆ ಪ್ರಕರಣ ಮತ್ತು ಪ್ರಸ್ತುತ ಪ್ರಕರಣ ಒಂದೇ ರೀತಿಯಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ‘ನಂದಿನಿ’ ಎಂಬ ಹೆಸರಿನ ಮುಂದೆ ಅಥವಾ ಹಿಂದೆ ಯಾವುದೇ ವಿಭಿನ್ನ ಪದವನ್ನು ಸೇರಿಸಲಾಗಿಲ್ಲ. ಹೀಗಾಗಿ ಇಂತಹ ನೇರ ಬಳಕೆಯನ್ನ ಅನುಮತಿಸಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ವರದಿ : ಲಾವಣ್ಯ ಅನಿಗೋಳ




