ಮಕ್ಕಳಿಗೆ ಇನ್‌ಸ್ಟಾಗ್ರಾಮ್ / ಫೇಸ್‌ಬುಕ್ ನಿಷೇಧ?

ಆಂಧ್ರಪ್ರದೇಶದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ಕುರಿತು ಅಧ್ಯಯನ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಸಂಬಂಧ ಕಠಿಣ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ರಾಜ್ಯದ ಐಟಿ ಸಚಿವ ನಾರಾ ಲೋಕೇಶ್ ಗುರುವಾರ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಈ ಕ್ರಮವು ಆಸ್ಟ್ರೇಲಿಯಾದ ಸಮಾನ ಕ್ರಮದ ಬೆನ್ನಲ್ಲೇ ಕೈಗೊಳ್ಳಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳನ್ನು ಸಾಮಾಜಿಕ ಜಾಲತಾಣದಿಂದ ದೂರವಿಡಲು ಕಾನೂನು ಜಾರಿಗೊಳಿಸಲಾಗಿದೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾರಾ ಲೋಕೇಶ್, ನಿರ್ದಿಷ್ಟ ವಯಸ್ಸಿನ ಒಳಗಿನ ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಇರಬಾರದು. ಏಕೆಂದರೆ ಅವರಿಗೆ ಆ ಮಾಧ್ಯಮದಲ್ಲಿ ತಾವು ನೋಡುತ್ತಿರುವ ವಿಷಯದ ಪರಿಣಾಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಒಂದು ರಾಜ್ಯವಾಗಿ, ನಾವು ಆಸ್ಟ್ರೇಲಿಯಾದ ಕಾನೂನನ್ನು ಅಧ್ಯಯನ ಮಾಡುತ್ತಿದ್ದೇವೆ. ಈ ಕುರಿತು ಬಲವಾದ ಕಾಯ್ದೆಯನ್ನು ರಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಈ ಯೋಜನೆಯನ್ನು ಶೀಘ್ರದಲ್ಲೇ ಮುಂದುವರಿಸಲು ತಯಾರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author