ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್ಗಳ ಕರಡು ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು ನೀಡಿದ್ದ ಸಮಯಾವಕಾಶ ಮುಕ್ತಾಯವಾಗಿದೆ. ಈ ಅವಧಿಯಲ್ಲಿ 700ಕ್ಕೂ ಹೆಚ್ಚು ಆಕ್ಷೇಪಣೆಗಳು ಮತ್ತು ಸಲಹೆಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
GBA ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ, ಜನವರಿ 9ರಂದು ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಜನವರಿ 23ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆನ್ಲೈನ್ ಮೂಲಕ ಹಾಗೂ ನಗರಾಭಿವೃದ್ಧಿ ಇಲಾಖೆಗೆ ನೇರವಾಗಿ ಸುಮಾರು 700ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.
ಕರಡು ವಾರ್ಡ್ ಮೀಸಲಾತಿಯಲ್ಲಿ ಸ್ಥಳೀಯ ಜಾತಿ ಆಧಾರದ ಮೇಲೆ ಸಮರ್ಪಕ ಮೀಸಲಾತಿ ನೀಡಿಲ್ಲ ಎಂಬುದು ಪ್ರಮುಖ ಆಕ್ಷೇಪಣೆಯಾಗಿದೆ. ಜೊತೆಗೆ, ಸರ್ಕಾರ ನಿಗದಿಪಡಿಸಿರುವಂತೆ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕರಡು ಪಟ್ಟಿಯಲ್ಲಿ ಮಹಿಳೆಯರಿಗೆ ಕೇವಲ ಶೇ.47 ಮೀಸಲಾತಿ ನೀಡಲಾಗಿದೆ ಎಂಬುದಾಗಿ ಆಕ್ಷೇಪಣೆ ಸಲ್ಲಿಸಲಾಗಿದೆ.
ಶೇ.50ರ ಪ್ರಮಾಣದಂತೆ ಮಹಿಳೆಯರಿಗೆ 185 ವಾರ್ಡ್ಗಳಲ್ಲಿ ಮೀಸಲಾತಿ ನೀಡಬೇಕಾಗಿತ್ತು. ಆದರೆ ಕರಡು ಪಟ್ಟಿಯಲ್ಲಿ ಕೇವಲ 176 ವಾರ್ಡ್ಗಳಿಗೆ ಮಾತ್ರ ಮಹಿಳಾ ಮೀಸಲಾತಿ ನೀಡಲಾಗಿದೆ. ಉಳಿದ 9 ವಾರ್ಡ್ಗಳಲ್ಲೂ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬುದು ಆಕ್ಷೇಪಣೆದಾರರ ಒತ್ತಾಯವಾಗಿದೆ. ಕೆಲವು ವಾರ್ಡ್ಗಳಲ್ಲಿ ಮೀಸಲು ಹಂಚಿಕೆಯಲ್ಲಿ ತಾರತಮ್ಯವಿದ್ದು, ಅದನ್ನು ಸರಿಪಡಿಸಬೇಕು ಎಂಬ ಸಲಹೆಗಳೂ ಬಂದಿವೆ.
ಯಾರಾರಿಗೆ ಎಷ್ಟು ರಿಸರ್ವೇಷನ್? ಕರಡು ಪಟ್ಟಿಯಲ್ಲಿ 369 ವಾರ್ಡ್ಗಳಲ್ಲಿ ಮಹಿಳೆಯರಿಗೂ ಸೇರಿ ಅನುಸೂಚಿತ ಜಾತಿಗೆ 43 ವಾರ್ಡ್, ಅನುಸೂಚಿತ ಪಂಗಡಕ್ಕೆ 7 ವಾರ್ಡ್, ಹಿಂದುಳಿದ A ವರ್ಗಕ್ಕೆ 97 ವಾರ್ಡ್, ಹಿಂದುಳಿದ B ವರ್ಗಕ್ಕೆ 24 ವಾರ್ಡ್ ಹಾಗೂ ಸಾಮಾನ್ಯ ವರ್ಗಕ್ಕೆ 198 ವಾರ್ಡ್ ಮೀಸಲಿಡಲಾಗಿದೆ. ಎಲ್ಲ ವಿಭಾಗಗಳಿಂದ ಮಹಿಳೆಯರಿಗೆ 176 ವಾರ್ಡ್ ಮೀಸಲಿಡಲಾಗಿದೆ. ಸರ್ಕಾರ ಆಕ್ಷೇಪಣೆ ಪರಿಗಣಿಸಿ ಎಲ್ಲೆಲ್ಲಿ ಬದಲಾವಣೆ ಮಾಡಲಿದೆ ಎಂದು ಕಾದು ನೋಡಬೇಕಿದೆ.
ವರದಿ : ಲಾವಣ್ಯ ಅನಿಗೋಳ




