ಟಾಟಾದ 17 ಹೊಸ ಟ್ರಕ್‌ಗಳ ಮೆಗಾ ಲಾಂಚ್

ದೇಶದ ಪ್ರಮುಖ ವಾಹನ ಉತ್ಪಾದಕ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ವಿವಿಧ ಶ್ರೇಣಿಯ 17 ಹೊಸ ಟ್ರಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ದೆಹಲಿಯ ಭಾರತ ಮಂಟಪಂನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಈ ಟ್ರಕ್‌ಗಳನ್ನು ಅನಾವರಣಗೊಳಿಸಲಾಯಿತು.

ಚಾಲಕರ ಸುರಕ್ಷತೆ ಹಾಗೂ ವಾಹನ ಮಾಲೀಕರ ಲಾಭದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಹೊಸ ‘ಅಜುರಾ’ ಸರಣಿ, ಮೊದಲ ಬಾರಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ವಿದ್ಯುತ್ ಚಾಲಿತ (EV) ಟ್ರಕ್‌ಗಳು ಹಾಗೂ ಪ್ರೈಮಾ, ಸಿಗ್ನಾ ಮತ್ತು ಅಲ್ಪಾ ಮಾದರಿಗಳ ಸುಧಾರಿತ ಆವೃತ್ತಿಗಳನ್ನು ಟಾಟಾ ಮೋಟಾರ್ಸ್ ಎಂಡಿ ಮತ್ತು ಸಿಇಒ ಗಿರೀಶ್ ವಾಫ್, ಉಪಾಧ್ಯಕ್ಷ ರಾಜೇಶ್ ಕೌಲ್ ಅವರ ಉಪಸ್ಥಿತಿಯಲ್ಲಿ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ವಾಫ್, ದೇಶದ ಪ್ರಗತಿಪರ ನೀತಿಗಳು, ಆಧುನಿಕ ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಟ್ರಕ್ ಉದ್ಯಮದಲ್ಲಿ ವೇಗವಾದ ಹಾಗೂ ಮಹತ್ವದ ಬದಲಾವಣೆಗಳು ನಡೆಯುತ್ತಿವೆ. ಭವಿಷ್ಯದ ಅಗತ್ಯಗಳನ್ನು ಮನಗಂಡು ಈ ಹೊಸ ಟ್ರಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಟಾಟಾ ಮೋಟಾರ್ಸ್‌ನ ಹೊಸ ‘ಅಜುರಾ’ ಸರಣಿಯ ಟ್ರಕ್‌ಗಳು ಮಧ್ಯಮ ಮತ್ತು ಹಗುರ ವಾಣಿಜ್ಯ ವಾಹನ (ILMCV) ವಿಭಾಗಕ್ಕೆ ಸೇರಿವೆ. 7 ರಿಂದ 19 ಟನ್ ವರೆಗಿನ ಸರಕು ಸಾಗಣೆಗೆ ಅನುಕೂಲವಾಗುವ ವಿವಿಧ ಮಾದರಿಗಳು ಲಭ್ಯವಿದ್ದು, 3.6 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿವೆ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author