ದೇಶಾದ್ಯಂತ ಸಂಚಲನ ಮೂಡಿಸಿರುವ ₹400 ಕೋಟಿ ನಗದು ದರೋಡೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಇನ್ನಷ್ಟು ಚುರುಕುಗೊಳಿಸಿದೆ. ಹವಾಲಾ ಆಪರೇಟರ್ ಎಂದು ಶಂಕಿಸಲಾಗಿರುವ ಆರೋಪಿ ವಿರಾಟ್ ಗಾಂಧಿಯನ್ನು ಜನವರಿ 28ರವರೆಗೆ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
SIT ಮುಖ್ಯಸ್ಥ ASP ಆದಿತ್ಯ ಮಿರ್ಖಲ್ಕರ್ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದ್ದು, ದರೋಡೆಯಾದ ಹಣ ಯಾರಿಗೆ ಸೇರಿದ್ದು, ಎಲ್ಲಿ ಸಾಗಿಸಲಾಗುತ್ತಿತ್ತು ಹಾಗೂ ಈ ಜಾಲದಲ್ಲಿ ಇನ್ನೂ ಯಾರು ಯಾರು ಭಾಗಿಯಾಗಿದ್ದಾರೆ ಎಂಬ ಕುರಿತು ಮಹತ್ವದ ಮಾಹಿತಿ ಕಲೆಹಾಕಲಾಗುತ್ತಿದೆ. ವಿರಾಟ್ ಗಾಂಧಿ ನೀಡಿರುವ ಹೇಳಿಕೆ ಆಧರಿಸಿ ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ತನಿಖೆಯ ಮತ್ತೊಂದು ಆಯಾಮದಲ್ಲಿ ತಾಂತ್ರಿಕ ಸಾಕ್ಷ್ಯಾಧಾರಗಳ ಸಂಗ್ರಹ ನಡೆಯುತ್ತಿದ್ದು, ದರೋಡೆಯಾದ ಕಂಟೇನರ್ ಹಾಗೂ ಹಣದ ಮೂಲದ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ. ಜೊತೆಗೆ ಈ ಹಗರಣದಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳ ಹೆಸರುಗಳು ಬಹಿರಂಗವಾಗುವ ಸಾಧ್ಯತೆಯೂ ಇದೆ. ದೂರುದಾರ ಸಂದೀಪ ವಾಟೀಲ್ ಅವರನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲೂ ವಿರಾಟ್ ಗಾಂಧಿಯ ಪಾತ್ರವಿದೆ ಎನ್ನಲಾಗಿದೆ.
ವಿರಾಟ್ ಗಾಂಧಿ ಬಿಲ್ಡರ್ ಕಿಶೋರ್ ಸಾಳ್ವೆ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ದರೋಡೆ ಸಂಚಿನ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಶಂಕಿಸಲಾಗಿದೆ. ದರೋಡೆಗೊಂಡ ಹಣ ಗುಜರಾತ್ನ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದನಾ? ಎಂಬ ದಿಕ್ಕಿನಲ್ಲೂ ತನಿಖೆ ನಡೆಯುತ್ತಿದೆ.
ಬಿಲ್ಡರ್ ಕಿಶೋರ್ ಸಾಳ್ವೆ ಕೇವಲ ಹಣ ಸಾಗಾಟದ ಉಸ್ತುವಾರಿ ವಹಿಸಿಕೊಂಡಿದ್ದ ಮಧ್ಯವರ್ತಿ ಎನ್ನಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಪ್ರಕರಣಕ್ಕೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದರ ನಡುವೆ ಆರೋಪಿಗಳಾದ ವಿರಾಟ್ ಗಾಂಧಿ ಹಾಗೂ ಜಯೇಶ್ ನಡುವೆ ನಡೆದಿರುವ ವಾಟ್ಸಾಪ್ ಕರೆ ಸಂಭಾಷಣೆಯ ಆಡಿಯೊ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
ಆಡಿಯೊದಲ್ಲಿ ಅಹಮದಾಬಾದ್ನ ಪ್ರಸಿದ್ಧ ಆಶ್ರಮವೊಂದರಲ್ಲಿ ನೋಟುಗಳ ವಿನಿಮಯ ನಡೆಯುವ ಜಾಲದ ಕುರಿತು ಚರ್ಚಿಸಿರುವುದು ಬೆಳಕಿಗೆ ಬಂದಿದೆ. ಈ ಭಾರಿ ಮೊತ್ತದ ಸಾಗಾಟದ ಜವಾಬ್ದಾರಿಯನ್ನು ಉದ್ಯಮಿ ಕಿಶೋರ್ ಸಾಳ್ವೆ ವಿರಾಟ್ಗೆ ನೀಡಿದ್ದರೂ, ಹಣವಿದ್ದ ಕಂಟೇನರ್ ಹಾಗೂ ಅದನ್ನು ಸಾಗಿಸುತ್ತಿದ್ದ ತಂಡ ಏಕಾಏಕಿ ನಾಪತ್ತೆಯಾಗಿರುವುದಾಗಿ ಆಡಿಯೊದಲ್ಲಿ ಉಲ್ಲೇಖವಾಗಿದೆ.
ವರದಿ : ಲಾವಣ್ಯ ಅನಿಗೋಳ




