ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮದುವೆಯಾಗಿ ಕೇವಲ 45 ದಿನಗಳಾಗಿದ್ದ ನವವಿವಾಹಿತ ಹರೀಶ್ (30) ಪತ್ನಿಯ ಕಿರುಕುಳ ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಹರೀಶ್ ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಜೀವ ಅಂತ್ಯಗೊಳಿಸಿಕೊಂಡಿದ್ದಾರೆ.
ತನ್ನ ಸಾವಿಗೆ ಪತ್ನಿಯ ವರ್ತನೆಯೇ ಕಾರಣ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿರುವ ಹರೀಶ್, ಪತ್ನಿ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಳು ಹಾಗೂ ಬೇರೊಬ್ಬ ಯುವಕನ ಜೊತೆ ಓಡಿ ಹೋಗಿ ತನ್ನ ಮೇಲೆ ಹಿಂಸೆ ಆರೋಪ ಮಾಡಿದ್ದಾಳೆ ಎಂದು ಬರೆದಿದ್ದಾರೆ.
ಪತ್ನಿ ಹಾಗೂ ಆಕೆಯ ಕುಟುಂಬದಿಂದ ಜೀವ ಬೆದರಿಕೆ ಇತ್ತು. ಇದರಿಂದ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಮುಂದಾಗುತ್ತಿದ್ದೇನೆ ಎಂದು ಹರೀಶ್ ಡೆತ್ ನೋಟ್ನಲ್ಲಿ ತಿಳಿಸಿದ್ದಾರೆ. ಅಲ್ಲದೇ ಪತ್ನಿ, ಆಕೆಯ ತಂದೆ–ತಾಯಿ ಹಾಗೂ ಚಿಕ್ಕಪ್ಪರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬೇಡಿಕೆ ಇಟ್ಟಿದ್ದು, ಆಸ್ತಿಗಿಂತ ಮಾನ ಮುಖ್ಯ ಎಂದು ಉಲ್ಲೇಖಿಸಿದ್ದಾರೆ.
ಕುಟುಂಬದವರಲ್ಲಿ ಕ್ಷಮೆ ಕೋರಿರುವ ಹರೀಶ್, ಪತ್ನಿಯ ಕಡೆಯವರ ಕಿರುಕುಳದಿಂದ ತನ್ನ ತಂದೆ–ತಾಯಿ ಮನೆ ಬಿಡುವ ನಿರ್ಧಾರಕ್ಕೂ ಬಂದಿದ್ದರು ಎಂದು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇನ್ನು ಹರೀಶ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ, ಈ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದ ಯುವತಿಯ ಸೋದರ ಮಾವ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಅನೆಕೊಂಡ ನಿವಾಸಿಯಾಗಿರುವ ರುದ್ರೇಶ್, ನಾಲ್ಕು ದಿನಗಳ ಹಿಂದೆ ಹರೀಶ್ ಪತ್ನಿ ಕುಮಾರ್ ಎಂಬ ಯುವಕನ ಜೊತೆ ಓಡಿಹೋಗಿದ್ದ ವಿಚಾರದಿಂದ ತೀವ್ರ ಮನಸ್ತಾಪಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಈ ಅವಮಾನವನ್ನು ಸಹಿಸಿಕೊಳ್ಳಲಾಗದೆ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಯುವತಿಯ ನಡೆ ಇಬ್ಬರ ಪ್ರಾಣಕ್ಕೆ ಕಾರಣವಾಗಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದು, ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಭಾರೀ ಆಘಾತ ಮೂಡಿಸಿದೆ.
ವರದಿ : ಲಾವಣ್ಯ ಅನಿಗೋಳ




