ಕೋಟಿ ಕ್ಲಬ್‌ಗೆ ರಾಜ್ಯದ ದೇಗುಲಗಳ ಕಮಾಲ್!

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರೆ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ನಾಲ್ಕನೇ ಸ್ಥಾನದಲ್ಲಿದೆ. ಜಿಲ್ಲಾವಾರು ಪಟ್ಟಿಯಲ್ಲಿ ನಂಜನಗೂಡಿನ ದೇಗುಲ ಎರಡನೇ ಸ್ಥಾನದಲ್ಲಿರುವುದು ವಿಶೇಷವಾಗಿದ್ದು, ಮೈಸೂರು ಜಿಲ್ಲೆಯ ಉಭಯ ದೇವಸ್ಥಾನಗಳಿಗೆ ಭಾರೀ ಭಕ್ತರ ಆಗಮನ ಹಾಗೂ ಹೆಚ್ಚುತ್ತಿರುವ ಆದಾಯಕ್ಕೆ ಇದು ಸಾಕ್ಷಿಯಾಗಿದೆ.

ರಾಜ್ಯದ ಅತ್ಯಧಿಕ ಆದಾಯದ ದೇವಾಲಯಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪಡೆದಿದ್ದು, ಎರಡನೇ ಸ್ಥಾನ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಪಾಲಾಗಿದೆ. ಐದರಿಂದ ಏಳನೇ ಸ್ಥಾನಗಳವರೆಗೆ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನ ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯಗಳು ಸ್ಥಾನ ಗಳಿಸಿವೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಎಂಟನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಒಂಬತ್ತನೇ ಸ್ಥಾನ ಹಾಗೂ ಬೆಂಗಳೂರು ನಗರ ಜಿಲ್ಲೆಯ ಬನಶಂಕರಿ ದೇವಸ್ಥಾನ ಹತ್ತನೇ ಸ್ಥಾನದಲ್ಲಿವೆ. ಈ ಪೈಕಿ ಮೈಸೂರು ಜಿಲ್ಲೆಯ ಎರಡು ದೇಗುಲಗಳು ಟಾಪ್–10 ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ ಅಂಶವಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಆದಾಯದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ, ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನವನ್ನು ಕಾಪಾಡಿಕೊಂಡಿದೆ. 2022–23ರಲ್ಲಿ 25.40 ಕೋಟಿ ರೂ., 2023–24ರಲ್ಲಿ 56.67 ಕೋಟಿ ರೂ. ಹಾಗೂ 2024–25ರಲ್ಲಿ 50.68 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 5.99 ಕೋಟಿ ರೂ. ಇಳಿಕೆ ದಾಖಲಾಗಿದೆ.

ಇತ್ತ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆದಾಯ ಮಾತ್ರ ನಿರಂತರ ಏರಿಕೆಯ ಹಾದಿಯಲ್ಲಿದೆ. 2022–23ರಲ್ಲಿ 26.71 ಕೋಟಿ ರೂ., 2023–24ರಲ್ಲಿ 30.36 ಕೋಟಿ ರೂ. ಹಾಗೂ 2024–25ರಲ್ಲಿ 36.12 ಕೋಟಿ ರೂ. ಆದಾಯ ದಾಖಲಾಗಿದ್ದು, ಹಿಂದಿನ ವರ್ಷಕ್ಕಿಂತ ಸುಮಾರು 6 ಕೋಟಿ ರೂ. ಹೆಚ್ಚುವರಿ ವರಮಾನ ಬಂದಿದೆ. ಮೈಸೂರು ಜಿಲ್ಲೆಯ ಈ ಎರಡೂ ದೇಗುಲಗಳಿಗೆ ಹೆಚ್ಚುತ್ತಿರುವ ಭಕ್ತಸಾಗರವೇ ಆದಾಯ ವೃದ್ಧಿಗೆ ಪ್ರಮುಖ ಕಾರಣವಾಗಿದೆ. ರಾಜ್ಯದ ಧಾರ್ಮಿಕ ಪ್ರವಾಸೋದ್ಯಮದ ಶಕ್ತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕಳೆದ ಮೂರು ವರ್ಷಗಳಲ್ಲಿ ಕ್ರಮವಾಗಿ 123 ಕೋಟಿ, 146 ಕೋಟಿ ಮತ್ತು 155 ಕೋಟಿ ರೂ. ಆದಾಯ ಗಳಿಸಿ ರಾಜ್ಯದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿದೆ. ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಆದಾಯವು ಚಾಮುಂಡೇಶ್ವರಿ ದೇವಸ್ಥಾನಕ್ಕಿಂತ 21 ಕೋಟಿ ರೂ. ಹೆಚ್ಚು ಎನ್ನಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author