ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ದೇಶದ ವೇತನ ವರ್ಗ ಮತ್ತು ಮಧ್ಯಮ ವರ್ಗದ ತೆರಿಗೆದಾರರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ನೇರ ಹಾಗೂ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಸರ್ಕಾರ ಉತ್ತಮ ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ, ಈ ಬಾರಿ ಜನಸಾಮಾನ್ಯರ ಆರ್ಥಿಕ ಹೊರೆಯನ್ನು ತಗ್ಗಿಸುವಂತಹ ಮಹತ್ವದ ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ.
ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹೆಚ್ಚಿನ ತೆರಿಗೆ ವಿನಾಯಿತಿಗಳನ್ನು ಘೋಷಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಬಜೆಟ್ನಲ್ಲಿ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಇದರಡಿ ವಾರ್ಷಿಕ ಒಟ್ಟು 12 ಲಕ್ಷ ರೂಪಾಯಿ ಆದಾಯದವರೆಗೆ ತೆರಿಗೆ ಪಾವತಿ ಅಗತ್ಯವಿಲ್ಲ.
ವೇತನ ಪಡೆಯುವ ತೆರಿಗೆದಾರರಿಗೆ 75 ಸಾವಿರ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿಸಿ ಈ ಮಿತಿ 12.75 ಲಕ್ಷ ರೂ. ಆಗುತ್ತದೆ. ಆದರೆ, ಹಳೆಯ ತೆರಿಗೆ ವ್ಯವಸ್ಥೆಯ ದರಗಳು 2017–18ರಿಂದ ಯಾವುದೇ ಬದಲಾವಣೆ ಇಲ್ಲದೇ ಮುಂದುವರಿದಿವೆ. ಹೀಗಾಗಿ ಪ್ರಸ್ತುತ 75 ಸಾವಿರ ರೂ. ಇರುವ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ವೇತನದಾರರಲ್ಲಿ ಜೋರಾಗಿದೆ.
ಮನೆಗಳ ಬೆಲೆ ಹಾಗೂ ಬ್ಯಾಂಕ್ ಬಡ್ಡಿದರಗಳು ಹೆಚ್ಚುತ್ತಿರುವ ನಡುವೆಯೂ, ಗೃಹ ಸಾಲದ ಬಡ್ಡಿಗೆ ಸಿಗುವ ವಾರ್ಷಿಕ 2 ಲಕ್ಷ ರೂ. ಕಡಿತ ಮಿತಿ ಹಲವು ವರ್ಷಗಳಿಂದ ಬದಲಾಗಿಲ್ಲ. ಇದನ್ನು ಕನಿಷ್ಠ 5 ಲಕ್ಷ ರೂ.ಗೆ ಏರಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ತೆರಿಗೆ ವಿಚಾರದಲ್ಲೂ ಮಹಿಳೆಯರಿಗೆ ವಿಶೇಷ ರಿಯಾಯಿತಿ ನೀಡುವ ಸಾಧ್ಯತೆ ಇದೆ. ವೃತ್ತಿಜೀವನದಿಂದ ವಿರಾಮ ಪಡೆದು ಮತ್ತೆ ಕೆಲಸಕ್ಕೆ ಸೇರುವ ಮಹಿಳೆಯರಿಗೆ ಆದಾಯ ತೆರಿಗೆ ವಿನಾಯಿತಿ ಘೋಷಿಸಬಹುದು. ಜೊತೆಗೆ ಮಹಿಳಾ ಉದ್ಯಮಿಗಳು ನಡೆಸುವ ನವೋದ್ಯಮ ಮತ್ತು ವ್ಯವಹಾರಗಳಿಗೆ ಕಡಿಮೆ ತೆರಿಗೆ ದರ ವಿಧಿಸುವ ಮೂಲಕ ಪ್ರೋತ್ಸಾಹ ನೀಡುವ ನಿರೀಕ್ಷೆಯೂ ಇದೆ.
2026ರ ಜನವರಿ 1ರಿಂದ 8ನೇ ವೇತನ ಆಯೋಗ ಜಾರಿಗೆ ಬರುವ ಸಾಧ್ಯತೆ ಕುರಿತು ಸರ್ಕಾರಿ ನೌಕರರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇದರೊಂದಿಗೆ 16ನೇ ಹಣಕಾಸು ಆಯೋಗದ ಶಿಫಾರಸುಗಳಂತೆ ರಾಜ್ಯಗಳಿಗೆ ತೆರಿಗೆ ಹಂಚಿಕೆ ಕುರಿತು ಕೂಡ ಈ ಬಜೆಟ್ನಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಮಧ್ಯಮ ವರ್ಗದ ತೆರಿಗೆದಾರರು ಹಾಗೂ ವೇತನದಾರರಿಗೆ ಈ ಬಜೆಟ್ ಎಷ್ಟರ ಮಟ್ಟಿಗೆ ಅನುಕೂಲಕರವಾಗಲಿದೆ ಎಂಬುದನ್ನು ತಿಳಿಯಲು ದೇಶವೇ ಫೆಬ್ರವರಿ 1ರತ್ತ ಕಣ್ಣಿಟ್ಟಿದೆ.
ವರದಿ : ಲಾವಣ್ಯ ಅನಿಗೋಳ




