
ಕರ್ನಾಟಕ ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ನೀಡುವಂತೆ, ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲವಾಗುವಂತೆ ಆ ದಿನ ಕಡ್ಡಾಯ ರಜೆ ನೀಡಿ. ಇದರಿಂದ ಒತ್ತಡದ ಕೆಲಸ ಹಾಗೂ ವ್ಯಯಕ್ತಿಕ ಜೀವನ ಸಮತೋಲನಕ್ಕೆ ರಜೆ ಸಹಾಯಕವಾಗಲಿದೆ ಎಂದು ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ನೀಡಿದ ಸಲಹೆಯ ಮೇರೆಗೆ ಈ ನಿರ್ಧಾರಕ್ಕೆ ಚಾಲನೆ ಸಿಕ್ಕಿದೆ. ಪ್ರಮುಖವಾಗಿ ಕೆಳ ಹಂತದ ಸಿಬ್ಬಂದಿಗಳಾದ ಪೊಲೀಸ್ ಕಾನ್ಸ್‌ಟೇಬಲ್ , ಹೆಡ್ ಕಾನ್ಸ್‌ಟೇಬಲ್, ಸಹಾಯಕ ಪೊಲೀಸ್ ಉಪನಿರೀಕ್ಷಕ ಶ್ರೇಣಿಯ ಅಧಿಕಾರಿಗಳಿಗೆ ಈ ರಜೆ ಸೌಲಭ್ಯ ಸಿಗಲಿದೆ.
ಡಿಜಿ-ಐಜಿಪಿ ಎಂ.ಎ. ಸಲೀಂ ಹೊರಡಿಸಿದ ಆದೇಶದಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಜಾರಿಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವಗಳಂತಹ ವೈಯಕ್ತಿಕ ಕಾರ್ಯಕ್ರಮಗಳನ್ನು ಆಚರಿಸುವುದು ಬಹಳ ಮಹತ್ವದ್ದಾಗಿದೆ. ಈ ವಿಶೇಷ ದಿನಗಳಲ್ಲಿ ರಜೆ ಪಡೆಯುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾವನಾತ್ಮಕವಾಗಿ ಪುನಶ್ಚತನಗೊಳ್ಳಲು ಸಹಾಯಕವಾಗುತ್ತದೆ. ಹೀಗಾಗಿ ತಪ್ಪದೇ ರಜೆ ಮಂಜೂರು ಮಾಡಲು ಎಲ್ಲಾ ಘಟಕಾಧಿಕಾರಿಗಳಿಗೆ ನಿರ್ದೇಶಿಸಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.



