ಅನ್ನಭಾಗ್ಯ ವಿಫಲ? ಸರ್ಕಾರಕ್ಕೆ ಟೆಂಗಿನಕಾಯಿ ಕ್ಲಾಸ್!

ಜನವರಿ ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ನೀಡದಿರುವುದು ಹಾಗೂ ಅಕ್ಕಿಯ ಬದಲು ಹಣವನ್ನೂ ಫಲಾನುಭವಿಗಳ ಖಾತೆಗೆ ಜಮಾ ಮಾಡದಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಿನ್ನೆ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ 2025ರ ಜನವರಿ ತಿಂಗಳ ಪಡಿತರ ಹಣ ಫಲಾನುಭವಿಗಳಿಗೆ ಜಮಾ ಆಗದಿರುವ ಬಗ್ಗೆ ಪ್ರಶ್ನೆ ಕೇಳಿದ್ದೇನೆ. ಆದರೆ ಉತ್ತರಿಸುವ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೇಂದ್ರ ಸರ್ಕಾರದ ಮೇಲೆ ಹೊಣೆ ಹಾಕಲು ಯತ್ನಿಸಿದರು ಎಂದು ಆರೋಪಿಸಿದರು.

ಇಂದು ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಹಣ ಬೆಳಗ್ಗೆ ಜಮಾ ಮಾಡಿದರೆ ಸಂಜೆ ಅಕ್ಕಿ ವಿತರಣೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಹಾಗಾದರೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಹಣ ಇಲ್ಲವೇ? ಜನವರಿಯ ಅಕ್ಕಿಯನ್ನೂ ಕೊಡಲಿಲ್ಲ, ಹಣವನ್ನೂ ಹಾಕಿಲ್ಲ ಎಂದು ಟೆಂಗಿನಕಾಯಿ ಪ್ರಶ್ನಿಸಿದರು.

ನಾನು 9 ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿದ್ದೇನೆ. ಎಲ್ಲ ಜಿಲ್ಲೆಗಳಿಂದಲೂ ಒಂದೇ ಉತ್ತರ ಬಂದಿದೆ – ಜನವರಿಯಲ್ಲಿ ಸಭೆ ನಡೆದಿದೆ, ಫೆಬ್ರವರಿಯಲ್ಲಿ ಹಣ ಹಾಕಿದ್ದೇವೆ ಎನ್ನುವುದಷ್ಟೇ. ಇದು ಭಿಕ್ಷೆ ಕೊಡುವ ವಿಚಾರವಲ್ಲ. ಕನಿಷ್ಠ 657 ಕೋಟಿ ರೂಪಾಯಿ ಹಣವನ್ನಾದರೂ ಬಿಡುಗಡೆ ಮಾಡಿ ಅಥವಾ ಅಕ್ಕಿಯನ್ನಾದರೂ ಕೊಡಿ. ಫಲಾನುಭವಿಗಳಿಗೆ ಮೋಸ ಮಾಡುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.

ವರದಿ : ಲಾವಣ್ಯ ಅನಿಗೋಳ

About The Author