ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿರುವ ನಿಫಾ ವೈರಸ್ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಒಂದಿಬ್ಬರು ಈ ಮಾರಕ ಸೋಂಕಿಗೆ ಬಲಿಯಾಗಿದ್ದು, ಮುಂಜಾಗ್ರತೆ ವಹಿಸದಿದ್ದರೆ ರೋಗ ವೇಗವಾಗಿ ಹರಡುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ನಿಫಾ ವೈರಸ್ RNA ಗುಂಪಿಗೆ ಸೇರಿದ ಪ್ಯಾರಾಮಿಕ್ಸೋ ವೈರಸ್ ಪ್ರಭೇದಕ್ಕೆ ಸೇರಿದ್ದು, 1999ರಲ್ಲಿ ಮಲೇಷಿಯಾದ ಸಂಗೈ ನಿಫಾ ಎಂಬ ಗ್ರಾಮದಲ್ಲಿ ಮೊದಲು ಪತ್ತೆಯಾಯಿತು. ಹಂದಿ ಸಾಕಾಣಿಕೆ ರೈತರಲ್ಲಿ ಆರಂಭವಾದ ಈ ಜ್ವರ, ಮೆದುಳಿನ ಉರಿಯೂತ ಹಾಗೂ ಉಸಿರಾಟದ ತೊಂದರೆ ಉಂಟುಮಾಡಿ ನೂರಾರು ಜೀವಗಳನ್ನು ಬಲಿ ಪಡೆದಿತ್ತು. ಆಗ ಸುಮಾರು 300 ಮಂದಿಗೆ ಸೋಂಕು ತಗುಲಿ, 100 ಮಂದಿ ಸಾವನ್ನಪ್ಪಿದ್ದರು.
2001ರಲ್ಲಿ ಭಾರತದ ಸಿಲಿಗುರಿಯಲ್ಲಿ 66 ಜನರಿಗೆ ಸೋಂಕು ದೃಢಪಟ್ಟಿದ್ದು, 45 ಮಂದಿ ಮೃತಪಟ್ಟಿದ್ದರು. ಇದೇ ವರ್ಷ ಬಾಂಗ್ಲಾದೇಶದಲ್ಲಿ 56 ಪ್ರಕರಣಗಳು ವರದಿಯಾಗಿದ್ದು, 50 ಮಂದಿ ಸಾವಿಗೀಡಾಗಿದ್ದರು. ಮಲೇಷಿಯಾ, ಬಾಂಗ್ಲಾದೇಶ, ಸಿಂಗಾಪುರ ಮತ್ತು ಭಾರತದಲ್ಲಿ ಕಳೆದ ಎರಡು ದಶಕಗಳಿಂದಲೂ ಈ ವೈರಸ್ ಮರುಮರು ಕಾಣಿಸಿಕೊಳ್ಳುತ್ತಿದೆ.
ವೈರಲ್ ಜ್ವರಗಳಂತೆ ನಿಫಾ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ
ತೀವ್ರ ಜ್ವರ, ತಲೆನೋವು, ವಾಂತಿ, ತಲೆಸುತ್ತು ಹಾಗೂ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ರೋಗ ಉಲ್ಬಣಗೊಂಡರೆ ಪ್ರಜ್ಞಾಹೀನತೆ, ಅಪಸ್ಮಾರ, ಗೊಂದಲದ ವರ್ತನೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ 5 ರಿಂದ 14 ದಿನಗಳೊಳಗೆ ಲಕ್ಷಣಗಳು ಆರಂಭವಾಗುತ್ತವೆ. ಚಿಕಿತ್ಸೆ ವಿಳಂಬವಾದರೆ 24 ರಿಂದ 48 ಗಂಟೆಗಳೊಳಗೆ ಕೋಮಾವಸ್ಥೆಗೂ ತಲುಪುವ ಸಾಧ್ಯತೆ ಇದೆ.
ಸೋಂಕಿತ ವ್ಯಕ್ತಿಯ ದೈಹಿಕ ಸಂಪರ್ಕ ಅಥವಾ ಸ್ಪರ್ಶದಿಂದ, ವೈರಸ್ ಹೊಂದಿರುವ ಬಾವಲಿಗಳು ಕಚ್ಚಿದ ಅಥವಾ ಸ್ಪರ್ಶಿಸಿದ ಹಣ್ಣುಗಳಿಂದ,
ಸೋಂಕಿತ ಹಂದಿಗಳ ಸಂಪರ್ಕದಿಂದ ನಿಫಾ ವೈರಸ್ ಹರಡಬಹುದು ಅಂತ ವೈದ್ಯರು ತಿಳಿಸಿದ್ದಾರೆ.
ಇದಲ್ಲದೆ ರೋಗಿಯನ್ನು ಆರೈಕೆ ಮಾಡುವ ವೈದ್ಯರು ಹಾಗೂ ನರ್ಸ್ಗಳಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ, ವಿಶೇಷ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡುವುದು ಅತ್ಯಂತ ಅಗತ್ಯವಾಗಿದೆ. ನಿಫಾ ವೈರಸ್ಗೆ ಸದ್ಯಕ್ಕೆ ನಿರ್ದಿಷ್ಟ ಲಸಿಕೆ ಇಲ್ಲ. ಆದ್ದರಿಂದ ಮುಂಜಾಗ್ರತೆ ಹಾಗೂ ಶೀಘ್ರ ಚಿಕಿತ್ಸೆಯೇ ರಕ್ಷಣೆಯ ಪ್ರಮುಖ ಮಾರ್ಗ ಎಂದು ವೈದ್ಯರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




