ರಾಜಣ್ಣ ಅಪೆಕ್ಸ್ ಕನಸು ಭಂಗ ಹೈಕಮಾಂಡ್ ವಾರ್ನಿಂಗ್!?

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿದ್ದೇ ಕೊನೇ ಕ್ಷಣದಲ್ಲಿ ಚುನಾವಣೆಯನ್ನು ಮುಂದೂಡಲು ಪ್ರಮುಖ ಕಾರಣ ಎನ್ನಲಾಗಿದೆ. ಮತಗಳ್ಳತನದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ್ದ ಹೋರಾಟವನ್ನು ಟೀಕಿಸಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎನ್. ರಾಜಣ್ಣ, ಇದೀಗ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ರಾಜಣ್ಣ ಪರವಾಗಿ ಸಿಎಂ ಬಣ ಸಕ್ರಿಯವಾಗಿ ಕಾರ್ಯತಂತ್ರ ರೂಪಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಪ್ರತಿಯಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ರವಿ ಕೂಡ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದಿದ್ದರು. ಈ ಹಿನ್ನೆಲೆ ಗುರುವಾರ ಚುನಾವಣೆಯನ್ನು ನಿಗದಿಪಡಿಸಲಾಗಿತ್ತು.

ಆರಂಭದಲ್ಲಿ ಅವಿರೋಧ ಆಯ್ಕೆಗೆ ಒಮ್ಮತ ಮೂಡದ ಕಾರಣ ಚುನಾವಣೆ ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಇದರ ಹಿಂದಿರುವ ನಿಜವಾದ ಕಾರಣ ಇದೀಗ ಬಹಿರಂಗವಾಗಿದೆ. ರಾಹುಲ್ ಗಾಂಧಿ ಹೋರಾಟವನ್ನು ಟೀಕಿಸಿದ್ದ ರಾಜಣ್ಣ ಅವರಿಗೆ ಮತ್ತೆ ಪ್ರಮುಖ ಹುದ್ದೆ ನೀಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸುತಾರಾಂ ಒಪ್ಪಿರಲಿಲ್ಲ ಎನ್ನಲಾಗಿದೆ.

ಈ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಕಣಕ್ಕಿಳಿದಿದ್ದ ಇಬ್ಬರೂ ಆಕಾಂಕ್ಷಿಗಳು ತಮ್ಮ ತಮ್ಮ ಬೆಂಬಲಿಗ ನಿರ್ದೇಶಕರೊಂದಿಗೆ ಹೋಟೆಲ್‌ಗಳಲ್ಲಿ ತಂಗಿದ್ದರು. ಇಬ್ಬರ ನಡುವೆ ತೀವ್ರ ಹಗ್ಗಜಗ್ಗಾಟ ನಡೆಯುತ್ತಿದ್ದ ಸಂದರ್ಭದಲ್ಲೇ ಹೈಕಮಾಂಡ್ ನೇರವಾಗಿ ಮಧ್ಯಪ್ರವೇಶಿಸಿ, ಯಾವುದೇ ಕಾರಣಕ್ಕೂ ರಾಜಣ್ಣ ಅಧ್ಯಕ್ಷರಾಗಬಾರದು ಎಂಬ ಸ್ಪಷ್ಟ ಸಂದೇಶ ರವಾನಿಸಿದೆ ಎನ್ನಲಾಗಿದೆ. ಈ ಸೂಚನೆಯ ಬಳಿಕವೇ ಚುನಾವಣೆಯನ್ನು ದಿಢೀರನೇ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪಕ್ಷದ ಒಳಜಗಳ ತಪ್ಪಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಉದ್ದೇಶದಿಂದ ಮುಂದಿನ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಅಗತ್ಯವಿದ್ದರೆ ಮೂರನೇ ಅಭ್ಯರ್ಥಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author