ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂಬ ಊಹಾಪೋಹಗಳ ನಡುವೆ, ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಮುಂಬರುವ ಚುನಾವಣೆಯಲ್ಲಿ UDFನ ‘ಸ್ಟಾರ್ ಪ್ರಚಾರಕ’ ಎಂದು ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಶಶಿ ತರೂರ್ ಅವರು ಕೇರಳದಲ್ಲಿ UDF ಚುನಾವಣಾ ಪ್ರಚಾರದ ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ತರೂರ್ ಅವರು ವಿಶ್ವ ಮಟ್ಟದಲ್ಲಿ ಪ್ರಸಿದ್ಧರಾಗಿದ್ದು, ಹೆಸರಾಂತ ಲೇಖಕರಾಗಿದ್ದಾರೆ.
ಜನಸಾಮಾನ್ಯರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಅವರು ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸತೀಶನ್ ಹೇಳಿದರು. ಚುನಾವಣೆ ಹಿನ್ನೆಲೆಯಲ್ಲಿ ತರೂರ್ ಮುಂದಿನ ಎರಡು ತಿಂಗಳು ಕೇರಳದಲ್ಲೇ ಉಳಿಯಲಿದ್ದು, ರಾಜ್ಯದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಿಗೆ ಅವರನ್ನು ಕರೆದುಕೊಂಡು ಹೋಗುವ ಯೋಜನೆಯನ್ನು ಪಕ್ಷ ರೂಪಿಸಿದೆ.
ಕೇರಳ ಕಾಂಗ್ರೆಸ್ ಘಟಕದ ಭಾಗವಾಗಿರುವ ಅವರು ಈ ಅವಧಿಯಲ್ಲಿ ರಾಜ್ಯ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಲಿದ್ದಾರೆ ಎಂದು ತಿಳಿಸಿದರು. ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ತಮ್ಮ ಹೆಸರನ್ನು ಪ್ರಸ್ತಾಪಿಸಿಲ್ಲ ಎಂಬ ಅಸಮಾಧಾನದಿಂದ ಶಶಿ ತರೂರ್ ಕೇರಳ ಚುನಾವಣಾ ಕಾರ್ಯತಂತ್ರ ಸಭೆಯಿಂದ ದೂರ ಉಳಿದಿದ್ದರು.
ಅಲ್ಲದೇ ಭಾರತ–ಪಾಕಿಸ್ತಾನ ನಡುವಿನ ಉದ್ವಿಗ್ನತೆಗಳ ಕುರಿತು ನೀಡಿದ್ದ ಹೇಳಿಕೆಗಳಿಂದ ಕಳೆದ ವರ್ಷ ಟೀಕೆಗೆ ಗುರಿಯಾಗಿದ್ದರು. ಆದರೂ ಪಕ್ಷದೊಂದಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಹೊಂದಾಣಿಕೆ ಮಾಡಿಕೊಂಡು, ಉಭಯಪಕ್ಷೀಯ ವಿದೇಶಾಂಗ ನೀತಿಯನ್ನು ಬೆಂಬಲಿಸುವ ನಿಲುವು ತಾಳಿದ್ದರು.
ವರದಿ : ಲಾವಣ್ಯ ಅನಿಗೋಳ




