10 ನೌಕರರಿದ್ದರೆ ವಾಣಿಜ್ಯ ಸಂಸ್ಥೆಗಳು ನೋಂದಣಿ ಕಡ್ಡಾಯ

ರಾಜ್ಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ‘ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನಿಯಮಗಳು – 2026’ ಅನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ಹೊಸ ನಿಯಮದ ಪ್ರಕಾರ, 10ಕ್ಕೂ ಹೆಚ್ಚು ಕಾರ್ಮಿಕರಿರುವ ವಾಣಿಜ್ಯ ಸಂಸ್ಥೆಗಳು ಮತ್ತು 20ಕ್ಕೂ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಈ ನಿಯಮದಲ್ಲಿ ಕಾರ್ಮಿಕರ ಕೆಲಸದ ಅವಧಿ, ವಿಶ್ರಾಂತಿ, ಸುರಕ್ಷತೆ ಮತ್ತು ಮಹಿಳಾ ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದ ತೀರ್ಮಾನಗಳು ಸ್ಪಷ್ಟವಾಗಿ ಜಾರಿಗೊಂಡಿವೆ. ವಾರಕ್ಕೆ 48 ಗಂಟೆಗೂ ಹೆಚ್ಚು ಕೆಲಸ ಮಾಡದಂತೆ, ದಿನನಿತ್ಯದ ಕೆಲಸದ ಅವಧಿ ವಿಶ್ರಾಂತಿ ಸೇರಿ 10 ಗಂಟೆ ಮೀರದಂತೆ ನಿಯಮಿಸಲಾಗಿದೆ. ನಿರಂತರ 5 ಗಂಟೆಗಳ ಕೆಲಸದ ನಂತರ ಕನಿಷ್ಠ ಅರ್ಧಗಂಟೆ ವಿಶ್ರಾಂತಿ ನೀಡಬೇಕು.

ರಾತ್ರಿ ವೇಳೆ ಕನಿಷ್ಠ 5 ಮಹಿಳೆಯರ ಗುಂಪಿನಲ್ಲಿ ಕೆಲಸ ನಿಯೋಜನೆ ಕಡ್ಡಾಯ, ಅಗತ್ಯವಿದ್ದರೆ ಪ್ರತ್ಯೇಕ ವಸತಿ ಮತ್ತು ಮೆಸ್ ವ್ಯವಸ್ಥೆ, ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಮಹಿಳಾ ಸೆಕ್ಯೂರಿಟಿ ಗಾರ್ಡ್ ನೇಮಕ ಕಡ್ಡಾಯ.
ನಿಗದಿತ ಸಂಖ್ಯೆಗಿಂತ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳಲ್ಲಿ ಸುರಕ್ಷತಾ ಸಮಿತಿ ರಚಿಸಬೇಕು. ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಸುರಕ್ಷತೆ ಕ್ರಮಗಳ ಬಗ್ಗೆ ಚರ್ಚಿಸಬೇಕು, ಸಮಿತಿಯಲ್ಲಿ ಕಾರ್ಮಿಕರ ಪ್ರತಿನಿಧಿಗಳು ಇರಬೇಕು ಮತ್ತು ಮಹಿಳಾ ಕಾರ್ಮಿಕರಿಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕು.

500 ರಿಂದ 1000 ಕಾರ್ಮಿಕರಿರುವ ಕಾರ್ಖಾನೆಗಳಲ್ಲಿ ಒಬ್ಬ ಸುರಕ್ಷತಾ
ಅಧಿಕಾರಿ ನೇಮಿಸುವುದು ಕಡ್ಡಾಯ, 1000 ಕ್ಕಿಂತ ಹೆಚ್ಚು ಕಾರ್ಮಿಕರಿದ್ದಲ್ಲಿ ಪ್ರತಿ ಹೆಚ್ಚುವರಿ 1000 ಕಾರ್ಮಿಕರಿಗೆ ಒಬ್ಬರಂತೆ ಹೆಚ್ಚಿನ ಅಧಿಕಾರಿ ನೇಮಿಸಬೇಕು. ಪ್ರತಿ ಕಾರ್ಮಿಕನಿಗೂ ನಿಗದಿತ ಕೆಲಸದ ‘ಅವಧಿಯ ಗಳಿಕೆ ರಜೆ ಮತ್ತು ವೈದ್ಯಕೀಯ ರಜೆಯ ಸೌಲಭ್ಯವಿರುತ್ತದೆ. ಈ ರಜೆಗಳ ವಿವರಗಳನ್ನು ಮತ್ತು ಪಾವತಿಸಿದ ವೇತನದ ಮಾಹಿತಿಯನ್ನು ಉದ್ಯೋಗದಾತರು ಅಧಿಕೃತ ರಿಜಿಸ್ಟರ್ ನಲ್ಲಿ ದಾಖಲಿಸಬೇಕು.

ಗ್ಯಾಸ್ ಅಥವಾ ಅಪಾಯಕಾರಿ ಹೊಗೆ ಇರುವ ಸಣ್ಣ ಕೋಣೆಗಳು, ಟ್ಯಾಂಕ್‌ಗಳು ಅಥವಾ ಪೈಪ್‌ಗಳ ಒಳಗೆ ಕಾರ್ಮಿಕರನ್ನು ಇಳಿಸುವ ಮೊದಲು ಅಲ್ಲಿನ ಗಾಳಿಯನ್ನು ಪರೀಕ್ಷಿಸಿ, ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನು ಕನಿಷ್ಟ 10ಕ್ಕಿಂತ ಹೆಚ್ಚು ಕಾರ್ಮಿಕರಿರುವ ವಾಣಿಜ್ಯ ಸಂಸ್ಥೆಗಳ ನೋಂದಣಿ ಶುಲ್ಕ 5000. 20 ರಿಂದ 50 ಕಾರ್ಮಿಕರಿರುವ ಕಾರ್ಖಾನೆಗಳ ನೋಂದಣಿ ಶುಲ್ಕ ₹1000 ಆಗಿದೆ.

ವರದಿ : ಲಾವಣ್ಯ ಅನಿಗೋಳ

About The Author