ಕಾರವಾರದ ಸಿದ್ದಾಪುರದಲ್ಲಿ ನಡೆದ 41 ವರ್ಷದ ವಸಂತ್ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ವಿಚಾರ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ನೈತಿಕ ಹೊಣೆ ಹೊರಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್, ಕಮಲಾಕರ್ ಭಟ್ ಎಂಬ ಜ್ಯೋತಿಷಿಯ ಅಕ್ರಮ ಸಂಬಂಧದ ಹಿನ್ನೆಲೆ ಈ ಅಮಾಯಕ ವ್ಯಕ್ತಿಯ ಜೀವ ಹೋಗಿರುವುದು ಅತ್ಯಂತ ದುರಂತಕರ ಎಂದು ಹೇಳಿದ್ದಾರೆ. ಈ ಕ್ರಿಮಿನಲ್ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿದೆ.
ಆದರೆ ಸಂಘಪರಿವಾರದ ಹಿನ್ನೆಲೆಯಿಂದ ಬಂದ ಬಿಜೆಪಿಯ ಶಾಸಕ ಸುರೇಶ್ ಕುಮಾರ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಂತಹ ಜನಪ್ರತಿನಿಧಿಗಳ ಪಾತ್ರ ಏನು ಎಂಬುದು ಸ್ವಸ್ಥ ಸಮಾಜದ ದೃಷ್ಟಿಯಿಂದ ಚರ್ಚೆಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ಕಮಲಾಕರ್ ಭಟ್ ಎಂಬ ಕೊಲೆ ಆರೋಪಿಗೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಬೆಂಬಲ ನೀಡಿರುವ ಆರೋಪ ಮಾಡಿರುವ ಹರಿಪ್ರಸಾದ್, ಕೊಲೆ ಆರೋಪಿಯನ್ನು ಪ್ರೋತ್ಸಾಹಿಸಿ ಬೆಳೆಸಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ? ಮಾಜಿ ಕಾನೂನು ಸಚಿವರಾಗಿದ್ದವರಿಗೆ ಇಷ್ಟೂ ಅರಿವಿಲ್ಲದಿರುವುದು ರಾಜ್ಯದ ದುರಂತ ಎಂದು ಕಿಡಿಕಾರಿದ್ದಾರೆ.
ಮೂಢನಂಬಿಕೆಯನ್ನು ಬಳಸಿಕೊಂಡು ಜನರನ್ನು ಯಾಮಾರಿಸುವ ‘ಗುರೂಜಿ’ಗಳ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ. ಕಮಲಾಕರ್ ಭಟ್ ತನ್ನ ಬಳಿಗೆ ಬರುವ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿದ್ದಾನೆ. ಅದೇ ಅಕ್ರಮ ಸಂಬಂಧ ಕೊಲೆಗೇ ಕಾರಣವಾಗಿದೆ. ಇಂತಹ ಮೂಢನಂಬಿಕೆ ಆಧಾರಿತ ಅಕ್ರಮ ದಂಧೆಗಳಿಗೆ ಬಿಜೆಪಿ ಶಾಸಕರು ಬೆಂಬಲ ನೀಡಿರುವುದು ಗಂಭೀರ ವಿಚಾರ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಸದನದಲ್ಲೇ ಮಹಿಳೆಯರನ್ನು ಅವಮಾನಿಸುವವರು, ಸಮಾಜದಲ್ಲಿ ಸ್ತ್ರೀ ಪೀಡಕರು, ಅತ್ಯಾಚಾರಿಗಳು ಹಾಗೂ ಕೊಲೆಗಡಕರಿಗೆ ಬಿಜೆಪಿಯೊಂದಿಗೆ ನೇರ ಸಂಬಂಧ ಹೇಗೆ? ಕರ್ನಾಟಕ ಬಿಜೆಪಿಯಲ್ಲಿ ಇಂತಹವರಿಗೆ ಪ್ರತ್ಯೇಕ ಮೋರ್ಚಾ ಇದೆಯೇ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಸಂಪೂರ್ಣ ನ್ಯಾಯಯುತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




